Wednesday, November 28, 2007

ಅಂಥವರಿರಬೇಕು ಇಂಥವರ ನಡುವೆ

  • ಗೋವಿಂದ ಮಡಿವಾಳರ

    ಣ್ಣಪುಟ್ಟ ವಿಷಯಗಳಿಗಾಗಿ ಬೀದಿರಂಪ ಮಾಡಿಕೊಂಡು ತಿರುಗಾಡುವ ನಮ್ಮ ರಾಜಕಾರಣಿಗಳನ್ನು ಕಂಡಾಗಲೆಲ್ಲ ನಮ್ಮೂರ ‘ಭಜನೆ ಬಸವ’ ಧುತ್ತನೆ ಎದುರಿಗೆ ಬಂದು ನಿಂತು, ಭಜನೆ ಮಾಡಿ ಹಲ್ಲುಗಿಂಜಿದ್ಹಾಂಗ ಅನ್ಸತದ.
    ಚಿಕ್ಕದಾದ ಹಳ್ಳಿ, ಊರ ಮುಂದೆ ಸದಾ ಹರಿಯುವ ನದಿ, ಗ್ರಾಮದ ಅಕ್ಕಪಕ್ಕದಲ್ಲಿ ಪೇರಲ ಹಣ್ಣಿನ ತೋಟಗಳು, ಹೀಗೆ ಸದಾ ಅಹ್ಲಾದಕರ ವಾತಾವರಣದ ಊರಲ್ಲಿ ಒಬ್ಬ ಹುಡುಗ ಇದ್ದ. ಆತನ ವಯಸ್ಸು ಸುಮಾರು ೧೨-೧೩ ವರ್ಷ. ಆತನ ಹೆಸರು ಭಜನೆ ಬಸವ ಅಂತ. ಅವನ ಹೆಸರು ಖರೇ ಖರೇ ಅಂದ್ರ ಭಜನೆ ಬಸವ ಅಲ್ಲವೇ ಅಲ್ಲ. ಅವನ ಹೆಸರು ಬರೀ ‘ಬಸವ’. ಆದರೆ ಅವರ ಚಿಕ್ಕಪ್ಪನ ಮಗನಿಗೂ ಬಸವ ಎಂದು ಹೆಸರು ಇಟ್ಟಕೂಡಲೇ ಇವನಿಗೆ ಅಟೋಮೆಟಿಕ್ಕಾಗಿ ಪ್ರಮೋಶನ್ ಸಿಕ್ಕು ‘ದೊಡ್ಡಬಸವ’, ಆಗಿಬಿಟ್ಟ. ಹೀಗೆ ಮುಂದೆ ತನ್ನ ಕರ್ತೃತ್ವ ಶಕ್ತಿಯಿಂದ ‘ಭಜನೆ ಬಸವ’ ಪದವಿನೂ ಪಡೆದ.
    ಈ ಬಸವ ಸದಾ ತನ್ನ ಚಿಕ್ಕ ತಂಗಿಯರನ್ನು ಕರೆದುಕೊಂಡು ಗ್ರಾಮದಲ್ಲಿ ಅಲ್ಲಿ ತಿರುಗಾಡುತ್ತಿದ್ದ. ಗ್ರಾಮ ಚಿಕ್ಕದು. ಯಾರದೇ ಮನೆಯಲ್ಲಿ ತಾಯಿಂದಿರು ಮಕ್ಕಳಿಗೆ ಸ್ವಲ್ಪು ಧ್ವನಿ ಏರಿಸಿ ಕೂಗಾಡಿದರೆ ಸಾಕು, ಕೇಳಿಸುತ್ತಿತ್ತು. ಹೀಗಾಗಿ ಗ್ರಾಮದಲ್ಲಿ ಎಲ್ಲೇ ತಾಯಿಂದಿರು ಮಕ್ಕಳಿಗೆ ರೇಗಾಡೋದು, ಅಥವಾ ಯಾರಾದರು ಹುಡುಗರು ಪರಸ್ಪರ ಜಗಳಮಾಡುತ್ತಿದ್ದರೆ ಇಂವಾ ಭಜನೆ ಮಾಡುತ್ತ, ತಾಳಕ್ಕೆ ತಕ್ಕಂತೆ ಗೋಣು ಅಲ್ಲಾಡಿಸುತ್ತ ಓಡೋಡಿ ನೇರವಾಗಿ ಧ್ವನಿ ಬಂದ ಸ್ಥಳಕ್ಕೆ ಹೋಗುತ್ತಿದ್ದ. ಅಲ್ಲಿ ನಡೆದ ಜಗಳ ನೋಡಲು ಭಜನೆ ಮಾಡಿ ಜನರನ್ನ ಸೇರಿಸುತ್ತಿದ್ದ. ಇವನ ಭಜನೆ ಸಪ್ಪಳ ಕೇಳಿದರೆ ಅಡುಗೆ ಮನೆಯಲ್ಲಿನ ಹೆಣ್ಣುಮಕ್ಕಳು ಅಂಗಳಕ್ಕೆ ಬಂದು ನಿಲ್ಲುತ್ತಿದ್ದರು. ಯಾರೋ ಜಗಳ ಮಾಡ್ತಾ ಇದ್ದಾರ ಅಂತಾ ಅವರಿಗೆ ಗ್ಯಾರಂಟಿ.
    ಮಹಿಳೆಯರ ಪರಸ್ಪರ ಜಗಳ ಮಾಡುತ್ತಿದ್ದರು ಅಂದರೆ, ಆತನಿಗೆ ಎಲ್ಲಿಲ್ಲದ ಉತ್ಸಾಹ. ಇತ ಅಲ್ಲಿಗೆ ಭಜನೆ ಮಾಡುತ್ತ ಹೋಗಿದ್ದಲ್ಲದೇ ಅಲ್ಲಿಂದ ಮರಳಿ ಓಡೋಡಿ ತನ್ನ ಮನೆಗೆ ಹೋಗುತ್ತಿದ್ದ. ಹೋಗುವ ಮಾರ್ಗ ಮಧ್ಯೆ ಮತ್ತೆ ಭಜನೆ ಮಾಡುತ್ತ ಇಂತಹವರ ಮನೆಯಲ್ಲಿ ಜಗಳ ನಡದೈತಿ ಅಂತಾ ಸಾರಿಕೊಂಡು ಹೋಗುತ್ತಿದ್ದ. ತನ್ನ ಚಿಕ್ಕ ತಂಗಿಯರನ್ನು ಬಗಲಲ್ಲಿ ಒಂದು, ಕೈಯಲ್ಲಿ ಇನ್ನೊಂದು ಹಿಡಿದುಕೊಂಡು ಮತ್ತೇ ಅದೇ ಸ್ಥಳಕ್ಕೆ ಬರುತ್ತಿದ್ದ. ಜಗಳ ಮುಗಿಯುವ ತನಕ ಅಲ್ಲೇ ಇದ್ದು ಆಗಾಗ ಭಜನೆ ಭಾರಿಸುತ್ತ ನಿಲ್ಲುತ್ತಿದ್ದ. ನೋಡುಗರಿಗೆ ಒಂದು ತರಹ ಮೋಜು ಅನಿಸುತ್ತಿತ್ತು. ಇಂತಹ ಕಾರ್ಯದಲ್ಲಿ ಫೇಮಸ್ ಆಗಿದ್ದಕ್ಕೆ ಮುಂದೆ ಇವನಿಗೆ ಗ್ರಾಮದಲ್ಲಿ ‘ದೊಡ್ಡ ಬಸವ’ ಎಂಬ ಹೆಸರಿನ ಬದಲು ‘ಭಜನೆ ಬಸವ’ ಎಂದು ತನ್ನಷ್ಟಕ್ಕೇ ತಾನ ಬದಲಾಗಿಬಿಟ್ಟುತ್ತು.
    ಈ ಬಸವ ಶಾಲೆಗೆ ಹೋಗದೇ ಇರಲಿಕ್ಕೂ, ಭಾರತ ದೇಶದ ಬಡತನಕ್ಕೂ ಒಂದೇ ಕಾರಣ. ಅದು ಜನಸಂಖ್ಯೆ ಹೆಚ್ಚಳ. ಆಗಿದ್ದು ಇಷ್ಟೇ. ಗ್ರಾಮದಲ್ಲಿ ಶಾಲೆ ಇತ್ತು. ಆತನಿಗೆ ಶಿಕ್ಷಣ ಕೊಡಿಸುವಷ್ಟು ಪಾಲಕರು ಆರ್ಥಿಕವಾಗಿ ಚೆನ್ನಾಗಿ ಇದ್ದರು. ಆದರೂ ಭಜನೆ ಬಸವ ಯಾಕೆ ಶಾಲೆಗೆ ಹೋಗಲಿಲ್ಲ? ಆ ಚಿಕ್ಕ ವಯಸ್ಸಿನಲ್ಲಿ ಮನೆಯಲ್ಲೇ ಇರ್‍ತಿದ್ದ ಅಂದರೆ, ಆತ ೧ನೇ ಇಯತ್ತ ಮುಗಿಸಿ ೨ನೇ ಇಯತ್ತಿಗೆ ಬಡ್ತಿ ಪಡೆಯುವಷ್ಟರಲ್ಲೇ ಅವನ ತಾಯಿ ಮೂವರು ಗಂಡು ಮಕ್ಕಳು ಇದ್ದಾಗಲೂ ಮತ್ತೆ ಒಂದರ ಹಿಂದೆ ಒಂದರಂತೆ ಮೂವರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಮನೆಯಲ್ಲಿ ಒಕ್ಕಲುತನ. ಅಕ್ಕಂದಿರು ಬೇರೆ ಇಲ್ಲ. ಹೀಗಾಗಿ ಮನೆಯಲ್ಲಿನ ಅಡುಗೆ, ಮುಸುರಿ ಕೆಲಸ ಎಲ್ಲವೂ ತಾಯಿಯ ಹೆಗಲಿಗೆ. ಚಿಕ್ಕ ಚಿಕ್ಕ ಮೂವರು ಹೆಣ್ಣು ಹುಡುಗಿಯರನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇರಲಿಲ್ಲ. ಚಿಕ್ಕವರನ್ನು ನೋಡಿಕೊಳ್ಳುವ ಜವಾಬ್ದಾರಿ ಈ ದೊಡ್ಡಬಸವನ ಹೆಗಲಿಗೆ ಏರಿತ್ತು. ಹೀಗಾಗಿ ಅವನ ಹೆಗಲ ಮೇಲಿನ ಸ್ಕೂಲ್ ಬ್ಯಾಗಿನ ಸ್ಥಳಕ್ಕೆ ತಂಗಿಯರು ಏರಿ ಕುಳಿತರು. ಶಾಲೆಗೆ ಚೆಕ್ಕರ್, ತಂಗಿಯರ ಪಾಲನೆಗೆ ಹಾಜರ್ ಅನ್ನುವಂತಾಯಿತು ಆತನ ಸ್ಥಿತಿ. ಹೀಗೆ ಅವನಿಗೆ ಶಿಕ್ಷಣದ ಬಡತನ. ದೇಶಕ್ಕೆ ಆರ್ಥಿಕ ಬಡತನ.
    ಮುಂದೆ ತಂಗಿಯರು ದೊಡ್ಡವರಾಗುವ ಹೊತ್ತಿಗೆ ದೊಡ್ಡಬಸವನ ಮೊಗದಲ್ಲಿ ಚಿಗುರು ಮೀಸೆ। ಅಲ್ಲಿಗೆ ಶಾಲೆ ದೂರಾಯಿತು। ಅವರದೇ ಪೇರಲ ಹಣ್ಣಿನ ತೋಟ ಕೈಹಿಡಿದು ಆವನನ್ನು ಕರೆಯಿತು. ಅಲ್ಲಿ ಕೆಲಸಗಾರರ ಜೊತೆ ಸೇರಿ ಬೀಡಿ ಸೇದುವುದು, ಎಲೆ ಅಡಿಕೆ, ತಂಬಾಕು ತಿನ್ನುವ ಹವ್ಯಾಸ ಬೆಳಸಿಕೊಂಡ. ಕೆಲಸದವರು ಎಷ್ಟು ದಿನಾ ಅಂತಾ ಇವನಿಗೆ ಬೀಡಿ, ತಂಬಾಕು ಕೊಟ್ಟಾರು? ಕ್ರಮೇಣ ಕೆಲಸಗಾರರು, ಇವತ್ತು ಸ್ವಲ್ಪ ಐತಿ. ನಮಗೆ ಸಾಲದು ಎಂದು ನುಣಿಚಿಕೊಳ್ಳಲಾರಂಭಿಸಿದರು. ಕಲಿತ ಹವ್ಯಾಸ ಕಾಡಲಾರಂಭಿಸಿತು. ಮನೆಯಲ್ಲಿ ಹಣ ಕೇಳಿದರೆ ಯಾತಕ್ಕೆ ಎಂದು ಹೇಳಬೇಕಾಗುತ್ತಿತ್ತು. ಕೊನೆಗೆ ಅದಕ್ಕೆ ಒಂದು ಉಪಾಯ ಹುಡುಕಿದ. ತಮ್ಮದೇ ತೋಟದ ಪೇರಲು ಹಣ್ಣು ಕದ್ದು ಮಾರಾಟ ಮಾಡಲಾರಂಭಿಸಿದ. ಪ್ರತಿ ವಾರದ ಹಣ್ಣಿನ ಇಳುವರಿಯಲ್ಲಿ ಪ್ರಮಾಣ ಕಡಿಮೆಯಾದ ಕುರಿತು ಆತನ ತಂದೆ ಮತ್ತು ಅಣ್ಣಂದಿರಿಗೆ ಸಂಶಯ ಬಂತು. ಕೆಲಸಗಾರರ ಮೇಲೆ ಸಂಶಯ ಮಾಡಲಾರಂಭಿಸಿದರು. ಆದರೆ ಇದ್ದಕ್ಕಿದ್ದಂತೆ ಒಂದು ದಿನ ರಾತ್ರಿ ಭಜನೆಬಸವ ಮನೆಯಲ್ಲಿ ರಾತ್ರಿ ಮಲಗಿದ್ದಾಗ ಕನವರಿಸಲಾರಂಭಿಸಿದ. ‘ಲೇ ಬಾಬಣ್ಣ ತೋಟದ ತಗ್ಗಿನ ಗಿಡದ ಟೊಂಗಿಗೆ ಇನ್ನೂರು ಪೇರ್‍ಲ್ ಹಣ್ಣಿನ ಮಂಕರಿ ಹಾಕೇನಿ ತಗೊಂಡು ಹೋಗು’ ಎಂದ. ಅವನ ಅಣ್ಣ, ತಾಯಿ ಇದನ್ನ ಕೇಳಿಸಿಕೊಂಡರು. ಮರುದಿನ ಮುಂಜಾನೆ ಅವರ ಅಣ್ಣ, ಭಜನೆ ಬಸವಾ ಹೇಳಿದ ಸ್ಥಳಕ್ಕೆ ಹೋಗಿ ನಿಂತ. ಪೇರಲ ಹಣ್ಣು ತೆಗೆದುಕೊಂಡು ಹೋಗುವವನು ಬಂದ. ಇಬ್ಬರು ಕಳ್ಳರನ್ನು ಏಕಕಾಲಕ್ಕೆ ಹಿಡಿದ. ಅಲ್ಲಿಂದ ಮುಂದೆ ಭಜನೆ ಬಸವನ ತಲಬು ಮಾಡಲು ಹಣ ಹೊಂದಿಸುವುದು ಕಷ್ಟವಾಯಿತು. ಮೊದಮೊದಲು ಅಂಗಡಿಗಳಲ್ಲಿ ಸಾಲ ಮಾಡಿದ. ಅವರು ಸಾಲ ಮರಳಿಸಲು ದುಂಬಾಲು ಬಿದ್ದಾಗ, ಮನೆಯಲ್ಲಿ ಹಣಕ್ಕಾಗಿ ಜಗಳ ಮಾಡಲಾರಂಭಿಸಿದ. ಒಂದ್ಸಲ ಕೊಟ್ಟರು, ಎರಡ್ಸಲ ಕೊಟ್ಟರು. ಮುಂದೆ ಕ್ರಮೇಣ ಕಡಿಮೆ ಮಾಡಿದರು. ಸಾಲ ತೀರಿಸದಿದ್ದಾಗ ಅಂಗಡಿವಯವರೇ ಒಂದು ಛೋಲ ಸಲಹೆ ಕೊಟ್ಟರು. ಹಣ ಕೊಡದಿದ್ದರೆ ನಿನ್ನ ಪಾಲಿನ ಆಸ್ತಿ ಕೇಳು ಅಂತಾ. ಈ ಐಡಿಯಾ ನದಿಯಲ್ಲಿ ಮುಳುಗುವವನಿಗೆ ಹುಲ್ಲು ಕಡ್ಡಿ ಆಸರೆ ಸಿಕ್ಕಂತಾಯಿತು. ಆ ಮೇಲೆ ತನ್ನ ಪಾಲಿನ ಆಸ್ತಿ ಕೇಳಲಾರಂಭಿಸಿದ. ಹೀಗೆ ಭಜನೆ ಬಸವನ ತಾಳ ಬೇಸೂರ ಆಗಲಾರಂಭಿಸಿತು. ಅವನ ಮಳ್ಳತನ, ಇನ್ನೊಬ್ಬರ ಹಣದಲ್ಲಿ ದುಶ್ಚಟ, ಅದಕ್ಕಾಗಿ ಮಾಡುವು ಕಳವು, ನಮ್ಮ ರಾಜಕಾರಣಿಗಳು ಕೀಳುವ ಲಂಚ, ಅದಕ್ಕಾಗಿ ಅಧಿಕಾರ, ಸಿಗದಿದ್ದರೆ ಪಕ್ಷ ಒಡೆಯುವ ಇಲ್ಲವೇ ಪಕ್ಷಾಂತರ ಮಾಡುವ ಕೆಲಸ ಹೀಗೆ.... ಭಜನೆ ಬಸವ, ರಾಜಕಾರಣಿಗಳು ನನ್ನ ಮನಸಿನ ಮೇಲೆ ಪರಸ್ಪರ ಓವರ್ ಲ್ಯಾಪ್ ಆಗುತ್ತ ಹೋಗುತ್ತಾರೆ.

    ಈ ಲೇಖನ ಕನ್ನಡಪ್ರಭ ಸಾಪ್ತಾಹಿಕ - ೨೫ ನವೆಂಬರ್ ೨೦೦೭ರ ಸಂಚಿಕೆಯಲ್ಲಿ ಪ್ರಕಟವಾದದ್ದು.

Sunday, November 4, 2007

ರಾಜಕೀಯ ರಥದ ಚಕ್ರದಡಿ ಗಡಿ ಚಳವಳಿ... -ಗೋವಿಂದ ಮಡಿವಾಳರ




ಕರಿ ಹೆಂಚು ಹೊದಿಸಿದ ಹಳೆಯದಾದ ಕಟ್ಟಡವೊಂದರಿಂದ ಫೈಲವಾನ್ ನಡಿಗೆಯಲ್ಲಿ ಎಂ.ಇ.ಎಸ್.ನ ಮುಖಂಡರೊಬ್ಬರು ಹೊರಗೆ ಬರುತ್ತಿದ್ದಂತೆ ಬಡಕಲು ದೇಹದ ಯುವಕನೊಬ್ಬ ಅವರ ಮುಂದೆ ಬಂದು ನಿಂತು, ತಾಂಬಾ ಸಾಹೇಬ(ನಿಂತಕೊಳ್ಳಿರಿ) ಎಂದಾಗ, ಆ ಮುಖಂಡರು ಆ ಕ್ಷಣಕ್ಕೆ ಬೆರಗಾಗಿ ನಿಂತರು.
ನಿಮ್ಮ ಮಾತು ಕೇಳಿಕೊಂಡು ನಾವು ಎಂ.ಇ.ಎಸ್.ಚಳವಳಿಯಲ್ಲಿ ಪಾಲ್ಗೊಂಡೆವು. ಕನ್ನಡಿಗರ, ಕರ್ನಾಟಕ ಸರಕಾರದ ಆಸ್ತಿಪಾಸ್ತಿ ಹಾನಿ ಮಾಡಿದ ಆರೋಪದ ಮೇಲೆ ಕಾರಾಗೃಹ ವಾಸ ಅನುಭವಿಸಿ ಈಗ ನಾವು ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದೇವೆ. ಕಾರಾಗೃಹದಿಂದ ಬಿಡುಗಡೆಗೆ ಯಾವುದೇ ಸಹಾಯ ನಿಮ್ಮಿಂದ ಆಗಲಿಲ್ಲ. ನಾವು ಹಣಕ್ಕಾಗಿ ಕೊಲೆ, ಸುಲಿಗೆಯನ್ನು ಅವಲಂಬಿಸಬೇಕಾಯಿತು. ನಮ್ಮ ಬದುಕು ಇವತ್ತು ಬೀದಿಪಾಲಾಗಿದೆ. ನಮಗೆ ಏನು ದಾರಿ ತೋರಿಸುತ್ತಿರಿ ತೋರಿಸಿರಿ ಎಂದು ಅವರ ದಾರಿಗೆ ಅಡ್ಡಗಟ್ಟಿ ನಿಂತ. ಅವರು ನಿಂತಿದ್ದ ಸ್ಥಳದಿಂದ ತೀರಾ ಸಮೀಪದಲ್ಲೇ ಪೊಲೀಸ್ ಠಾಣೆ. ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದರು. ಆ ಯುವಕನನ್ನು ಪೊಲೀಸ್ ಠಾಣೆಗೆ ಎಳೆದುಕೊಂಡು ಹೋದರು.
ಅಲ್ಲಿಗೆ ಮುಗಿಯಿತು. ಆ ಯುವಕನ ಪ್ರಶ್ನೆಗೆ ಎಂ.ಇ.ಎಸ್. ಮುಖಂಡನ ಉತ್ತರ ಅಷ್ಟೇ. ಮುಂದೆ ಆ ಯುವಕ ಕೊಲೆ ಸುಲಿಗೆಯಲ್ಲಿ ಭೂಗತ ಜಗತ್ತನ್ನು ಮೀರಿಸುವಷ್ಟು ಬೆಳೆದು ನಿಂತ. ಬೆಳಗಾವಿಯಲ್ಲಿ ಇದು ಒಬ್ಬ ಯುವಕನ ಪ್ರಶ್ನೆ ಅಲ್ಲ. ಇಂತಹ ಹಲವಾರು ಯುವಕರು ಗಡಿ ವಿವಾದ ಹೋರಾಟದಲ್ಲಿ ಬದುಕನ್ನೇ ಕಳೆದುಕೊಂಡರು. ಅವರಲ್ಲಿ ಹಲವು ಹುಡುಗರು ಭೂಗತ ಜಗತ್ತಿಗೆ ಜಾರಿಕೊಂಡರು. ಬೆಳಗಾವಿ ನಗರದಲ್ಲಿ ಭೂಗತ ಜಗತ್ತಿನ ಎರಡೆರಡು ಗುಂಪುಗಳು ಬೆಳೆದುಕೊಂಡವು. ಅವರು ಕೊಲೆ ಸುಲಿಗೆಯಲ್ಲಿ ತಮ್ಮ ತಮ್ಮಲ್ಲೇ ಸ್ಪರ್ಧೆಗೆ ಇಳಿದರು. ಆ ಯುವಕ ಸೇರಿದಂತೆ ಹಲವಾರು ಯುವಕರು ನಡುಬೀದಿಯ ಹೆಣವಾಗಿ ಹೋದರು. ಇದು ಎಂ.ಇ.ಎಸ್.ನ ಕೊಡುಗೆ.
ಈಗ ಅವರ ಸಂತಾನ ಹೆಚ್ಚಾಗಿ ಈಚೆಗೆ ಪ್ರವೀಣ ಸಿಂತ್ರೆನಂತಹವರು ಎಂತಹ ಅಪಾಯಕಾರಿಯಾಗಿ ಬೆಳೆದರು ಅಂದ್ರೆ, ಹಣಕ್ಕಾಗಿ ಎಲ್ಲೆಂದರಲ್ಲಿ ಸುಫಾರಿ ಕೊಲೆಗಾರನಾಗಿ ಬೆಳೆದು ನಿಂತ. ಕೊನೆಗೆ ಪೊಲೀಸರ ಗುಂಡಿಗೆ ತನ್ನ ಬದುಕನ್ನು ಶರಣಾಗಿಸಿದ. ಹೀಗೆ ಎಂ.ಇ.ಎಸ್.ನ ದೀರ್ಘ ಹೋರಾಟದ ಫಲವಾಗಿ ಇವರು ಬೆಳೆದವರು. ಆ ಹುಡುಗರನ್ನು ನಿಯಂತ್ರಿಸುವ ಕಾರ್ಯಕ್ಕೆ ಎಂ.ಇ.ಎಸ್.ನ ಮುಖಂಡರು ಯಾರೂ ಪ್ರಯತ್ನಿಸಲೇ ಇಲ್ಲ. ಹಿಂಸಾ ಕಾರ್ಯಕ್ಕೆ ಬಳಸಿಕೊಂಡರೇ ವಿನಹ ಒಳ್ಳೆಯ ಕಾರ್ಯಕ್ಕೆ ಅವರನ್ನು ತೊಡಗಿಸುವ ಪ್ರಯತ್ನ ಮಾಡಲೇ ಇಲ್ಲ.
ಎಂ.ಇ.ಎಸ್.ನ ಚಳವಳಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೋಲಿಸಿದರೆ ತೀರಾ ಚಿಕ್ಕದು. ಆದರೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಲಕ್ಷಾಂತರ ಜನರು ಬ್ರಿಟೀಷರ ವಿರುದ್ಧ ಹೋರಾಟ ಮಾಡಿದರು. ಅವರಾರು ಹೀಗೆ ಕೊಲೆ, ಸುಲಿಗೆಗಾರರಾಗಿ ಬೆಳೆಯಲಿಲ್ಲ. ಅವರನ್ನು ಯಾರೂ ಬೆಳೆಯಲು ಪ್ರಚೋದಿಸಲಿಲ್ಲ. ಅವರಿಗೆ ಸ್ಪಷ್ಟವಾಗಿ ಹೋರಾಟದ ಕಲ್ಪನೆ ಮೂಡಿಸಲಾಗಿತ್ತು. ಹೋರಾಟದ ನೇತೃತ್ವ ವಹಿಸಿಕೊಂಡವರು ತಮ್ಮ ಬೆಂಬಲಿಗರ ನಡೆಯನ್ನು ಗಮನಿಸಲೇಬೇಕು. ಗಾಂಧೀಜಿ ಹೇಳುವಂತೆ ‘ಗುರಿ ಜೊತೆಗೆ ಅನುಸರಿಸುವ ಮಾರ್ಗ ಕೂಡಾ ಒಳ್ಳೆದೇ ಇರಬೇಕು’. ಇಲ್ಲದಿದ್ದರೆ ಏನಾಗಬಹುದು ಎಂಬುದಕ್ಕೆ ಎಂ.ಇ.ಎಸ್.ಚಳವಳಿ ಒಂದು ನಿದರ್ಶನ.
ಎಂ.ಇ.ಎಸ್.ಚಳವಳಿಯ ದಾರಿ ತಪ್ಪಲು ಬೆಳಗಾವಿಯಲ್ಲಿನ ಸ್ಥಳೀಯ ರಾಜಕಾರಣಿಗಳು ಮತ್ತು ಕೆಲ ಮರಾಠಿ ಪತ್ರಿಕೆಯ ಮಾಲಿಕರು ಕಾರಣ. ತೀರಾ ಸ್ವಹಿತದ ಸಾಧನೆಗಾಗಿ ಗಡಿ ಚಳವಳಿ ಬಳಸಿಕೊಳ್ಳಲಾರಂಭಿಸಿದರು.
ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುತ್ತದೆ. ನಾವೆಲ್ಲ ನಮ್ಮ ಮಹಾರಾಷ್ಟ್ರದಲ್ಲಿ ಇರುತ್ತೇವೆ. ನಮ್ಮ ಮಕ್ಕಳಿಗೆ ಉದ್ಯೋಗ ಅವಕಾಶ ಸಿಗುತ್ತದೆ. ನಮ್ಮ ಮಕ್ಕಳು ಎಲ್ಲರಂತೆ ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆಯುತ್ತಾರೆ. ನಮ್ಮ ಸಂಸ್ಕೃತಿ, ಸಂಬಂಧಗಳು ಕಳಚಿಕೊಳ್ಳುವುದಿಲ್ಲ ಎಂದು ಕಟ್ಟಿಕೊಂಡ ಜನಸಾಮಾನ್ಯ ಮರಾಠಿಗರ ಕನನಸುಗಳು ಈಗ ಅನಾಥವಾಗಿವೆ.
ರಾಜಕಾರಣಿಗಳ ರಾಜಕೀಯ ಮೇಲಾಟದಲ್ಲಿ ಜನಸಾಮಾನ್ಯ ಮರಾಠಿಗರ ತಮ್ಮ ಸಂಸ್ಕೃತಿ, ಭಾಷೆ, ಸಂಬಂಧಗಳನ್ನು ಕಳೆದುಕೊಳ್ಳುವ ಚಿಂತೆಯ ತೆಕ್ಕೆಗೆ ಸೇರಿದರು. ಕರ್ನಾಟಕ ಸರಕಾರ ಬೆಳಗಾವಿಯ ಮೇಲೆ ತನ್ನ ಪ್ರಭಲವಾದ ಹಕ್ಕು ಸ್ಥಾಪಿಸಲು ಯೋಜನೆ ರೂಪಿಸಲಾರಂಭಿಸಿದ ಮೇಲೆ ರಾಜಕಾರಣಿಗಳು ಅಧಿಕಾರ ಕಳೆದುಕೊಳ್ಳುವ ಅತಂಕದಲ್ಲಿ ಇದ್ದಾರೆ.
ಬೆಳಗಾವಿಯಲ್ಲಿ ೧೯೮೬ನೇ ಸಾಲಿನಿಂದ ರಾಜ್ಯ ಸರಕಾರ ಶಾಲೆಗಳಲ್ಲಿ ಕನ್ನಡ ಕಲಿಕೆ ಕಡ್ಡಾಯಗೊಳಿಸುವ ಮತ್ತು ಮುಂದೆ ಸರಕಾರಿ ನೌಕರಿಗೆ ಸೇರಲು ಕನ್ನಡ ಕಲಿಕೆ ಅಗತ್ಯ ಎಂಬ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರುವಲ್ಲಿ ದಿಟ್ಟ ಹೆಜ್ಜೆ ಇಟ್ಟಾಗ ಮರಾಠಿ ಭಾಷಿಕ ಹುಡುಗರ ಬದುಕಿನ ಹೆಜ್ಜೆಗಳು ನಿಂತಲ್ಲೇ ನಿಂತು ಬಿಟ್ಟವು. ನಿಶಕ್ತವಾದವು. ಎಂಇಎಸ್ ಮುಖಂಡರ ಭರವಸೆ ನಂಬಿ ಮಕ್ಕಳಿಗೆ ಕನ್ನಡ ಕಲಿಸಲು ಮರಾಠಿಗರು ಸರಕಾರದ ಆದೇಶ ವಿರೋಧಿಸಿದರು. ಈಗ ಕೇಂದ್ರದ ಸಚಿವರಾಗಿರುವ ಶರದ ಪವಾರ, ಭಾರತೀಯ ಓಲಂಪಿಕ್‌ನ ಚೇರಮನ್ ಸುರೇಶ ಕಲ್ಮಾಡಿ ಅವರು ಸೇರಿದಂತೆ ಅಂದು ಎಲ್ಲರೂ ಬೆಳಗಾವಿಗೆ ಬಂದು ಬೃಹತ್ ಪ್ರಮಾಣದಲ್ಲಿ ಚಳವಳಿ ನಡೆಸಿದರು. ಕರ್ನಾಟಕ ಸರಕಾರ ಅದಕ್ಕೆ ಮಣಿಯಲಿಲ್ಲ. ಮರಾಠಿ ಭಾಷಿಕರ ಮಕ್ಕಳು ಕನ್ನಡ ಕಾರಣಕ್ಕಾಗಿ ಮಾಧ್ಯಮಿಕ ಶಾಲೆಗೆ ಸೇರುವ ಮುನ್ನವೇ ತಮ್ಮ ಶೈಕ್ಷಣಿಕ ಬದುಕಿನ ದಾರಿಯನ್ನು ಕಳೆದುಕೊಂಡರು. ಹಣವಂತರು ಖಾಸಗಿ ಮರಾಠಿ ಶಾಲೆ, ಕಾಲೇಜುಗಳಲ್ಲಿ ಶಿಕ್ಷಣ ಪಡೆದರೂ ನೌಕರಿಗಾಗಿ ದಿಕ್ಕು ತೋಚದೆ ಕುಳಿತರು. ಮುಂಬಯಿ, ಪುಣೆ, ಕೊಲ್ಲಾಪುರ, ಗೋವಾ ಎಂದು ನೌಕರಿಗಾಗಿ ಅಂಡೆಲೆಯತ್ತಿದ್ದಾರೆ. ಅಲ್ಲಿ ನೆಲೆ ಕಂಡುಕೊಂಡವರು ತೀರಾ ವಿರಳ. ಮರಳಿ ಬೆಳಗಾವಿಗೆ ಬಂದವರೇ ಹೆಚ್ಚು. ಹಾಗೆ ಮರಳಿ ಬಂದವರಲ್ಲಿ ಹೆಚ್ಚಿನವರು ಸಣ್ಣಪುಟ್ಟ ವ್ಯಾಪಾರ,ರಿಕ್ಷಾ, ಟೆಂಪೋ, ಕಾರು ನಡೆಸಲಾರಂಭಿಸಿದರು. ಬಿಸಿ ರಕ್ತದ ಹುಡುಗರು ಎಂ.ಇ.ಎಸ್. ಸಂಘಟನೆಯೊಂದಿಗೆ ಸೇರಿಕೊಂಡು ಮೇಲಿಂದ ಮೇಲೆ ಚಳವಳಿಯಲ್ಲಿ ಪಾಲ್ಗೊಂಡು ವಿದ್ವಂಸಕ ಕೃತ್ಯಗಳಲ್ಲಿ ಪಾಲ್ಗೊಂಡು ಕಾರಾಗೃಹ, ಕೋರ್ಟ್ ಹೀಗೆ ತಮ್ಮ ಬದುಕಿನ ಕನಸುಗಳನ್ನು ಕಳೆದುಕೊಂಡರು. ಅದರಲ್ಲಿ ತೀರಾ ಉಗ್ರ ಸ್ವಭಾವದ ಹುಡುಗರು ಗೂಂಡಾಗಳಾಗಿ ತಮ್ಮದೇ ಆದ ರೀತಿಯ ಭೂಗತ ಜಗತ್ತು ಸೃಷ್ಟಿಸಿಕೊಂಡರು. ಕೈಬೆರಳೆಣೆಸುವಷ್ಟು ಜನರು ನಗರಸೇವಕರಾಗಿ ಆಸ್ತಿ, ಹಣ ಮಾಡಿಕೊಂಡು ನವೆಂಬರ್ ೧ರಂದು ಕರಾಳ ದಿನಾಚರಣೆ ಆಚರಿಸುವುದನ್ನು ಬಿಟ್ಟರೆ, ಪಾಲಿಕೆಯಲ್ಲಿ ‘ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ’ ಅನ್ನುವುದು. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಘೋಷಣೆ ಕೂಗುವುದಷ್ಟಕ್ಕೆ ಸಿಮಿತವಾದರು. ಅದರೆ ಅದರಾಚೆ ಅವರು ಬೆಳಗಾವಿ ನಗರದ ಅಭಿವೃದ್ಧಿ, ಮರಾಠಿಗರ ಬದುಕಿಗೆ ಸುರಕ್ಷತೆ ಭಾವನೆ ಹುಟ್ಟಿಸುವ ರಚನಾತ್ಮಕ ಕಾರ್ಯ ಮಾಡಲೇ ಇಲ್ಲ.
ಎಂ.ಇ.ಎಸ್.ಮುಖಂಡರು ಎಂದು ಹೇಳಿಕೊಳ್ಳುವ ಮರಾಠಿ ಭಾಷಿಕ ಮುಖಂಡರು ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಗಡಿ ಸಮಸ್ಯೆ ಮುಂದೆ ಮಾಡಿ ಹೋರಾಟ ಮಾಡುತ್ತಿದ್ದಾರೆ. ಅವರಿಗೂ ಗೊತ್ತು ಗಡಿ ಸಮಸ್ಯೆ ಬಗೆ ಹರಿಯಲಾರದು ಎಂಬುದು. ಆದರೆ ಅದನ್ನು ಮರಾಠಿ ಜನರಿಗೆ ಮನವರಿಕೆ ಮಾಡಿ ಅವರಿಗೆ ಅವರ ಭಾಷೆ, ಸಂಸ್ಕೃತಿ, ಮಕ್ಕಳಿಗೆ ಉದ್ಯೋಗ ದೊರಕಿಸಿಕೊಡುವ ಪರ್ಯಾಯ ವ್ಯವಸ್ಥೆ ರೂಪಿಸುವ ರಚನಾತ್ಮಕ ಕೆಲಸದಲ್ಲಿ ತೊಡಗಿಸಿಕೊಳ್ಳುವ ಪ್ರಬುದ್ಧತೆ ಅವರಿಗೆ ಇಲ್ಲ. ಪ್ರಬುದ್ಧತೆ ಕೊರತೆಯಿಂದ ಬೆಳಗಾವಿಯಲ್ಲಿನ ಮರಾಠಿಗರ ಬದುಕು, ಬೆಳಗಾವಿ ಅಭಿವೃದ್ಧಿಯನ್ನು ಕುಂಠಿತಗೊಳಿಸಿದ್ದಾರೆ. ಎಂ.ಇ.ಎಸ್. ದೀರ್ಘಕಾಲದ ಚಳವಳಿಯ ಪ್ರತಿಫಲದಲ್ಲಿ ಇದೂ ಒಂದು.
ಇನ್ನೊಂದು ಮುಖ:೧೯೮೬ರಲ್ಲಿ ಬೆಳಗಾವಿ ಜಿಲ್ಲೆಯ ಬೆಳಗಾವಿ, ನಿಪ್ಪಾಣಿ, ಖಾನಾಪುರ, ಉಚಗಾಂವ ಈ ನಾಲ್ಕು ಸ್ಥಳಗಳಲ್ಲಿ ಗಡಿ ಚಳವಳಿ ಜೋರಾಗಿ ನಡೆದಿತ್ತು. ನಿಪ್ಪಾಣಿಯಲ್ಲಿ ಅಂದು ಒಂದು ದಿನ ಕೊಲ್ಲಾಪುರದ ಒಂದು ನೂರು ಫೈಲುವಾನರು ಎಂ.ಇ.ಎಸ್.ಪರವಾಗಿ ಸತ್ಯಾಗ್ರಹ ನಡೆಸಲು ನಿಪ್ಪಾಣಿಗೆ ಬರುವ ಕಾರ್ಯಕ್ರಮ. ಅಲ್ಲಿ ಏನಾದರು ಅನಾಹುತ ಆಗಬಹುದು ಎಂದು ರಾಜ್ಯ ಸರಕಾರ ಮತ್ತು ಜಿಲ್ಲಾ ಆಡಳಿತ ವ್ಯಾಪಕ ಪೊಲೀಸ್ ಬಂದೋ ಬಸ್ತ್ ಮಾಡಿತ್ತು. ಆಗ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಾರಾಯಣ ಅವರು ಕಾರ್ಯನಿರ್ವಹಿಸುತ್ತಿದ್ದರು. ಅವರು ತುಂಬಾ ಖಡಕ್ ಅಧಿಕಾರಿ ಅಂತಲೇ ಹೆಸರು ಪಡೆದವರು. ಅವತ್ತು ನಿಪ್ಪಾಣಿ ಸತ್ಯಾಗ್ರಹ ಸ್ಥಳದಲ್ಲಿ ಹಾಜರಿದ್ದರು. ಆಗಿನ ನಿಪ್ಪಾಣಿ ಶಾಸಕ ವೀರಕುಮಾರ ಪಾಟೀಲ ಅವರು ಸಹ ಅಲ್ಲೇ ಇದ್ದರು. ಆಗ ವೀರುಕಮಾರ ಪಾಟೀಲ ಅವರು ಕಟ್ಟಾ ಎಂ.ಇ.ಎಸ್.ಮನುಷ್ಯ. ಮರಾಠಿ ಭಾಷಿಕ ಜನರು ಭಾರಿ ಪ್ರಮಾಣದಲ್ಲಿ ಸೇರಿದ್ದರು. ಧಂಗೆ ಏಳುವ ಸಾಧ್ಯತೆ ಇತ್ತು. ನಾರಯಣ ಅವರು ನೇರವಾಗಿ ಶಾಸಕ ವೀರಕುಮಾರ ಪಾಟೀಲರ ಬಳಿ ಹೋಗಿ, ಸಾಹೇಬರ ಇಲ್ಲಿ ನೆರೆದಿರುವ ಎಲ್ಲ ಜನರನ್ನು ಇಲ್ಲಿಂದ ಕದಲಲು ಹೇಳಿ. ಗಲಾಟೆ ಆಗುವ ಸಾಧ್ಯತೆ ಇದೆ. ಇದು ಸರಿ ಅಲ್ಲ ಎಂದು ವಿನಂತಿಸಿಕೊಂಡರು. ಆಗ ಅವರು, ಇಲ್ಲ. ಅವರೆಲ್ಲ ಸತ್ಯಾಗ್ರಹಕ್ಕೆ ಬೆಂಬಲಿಸಲು ಬಂದಿದ್ದಾರೆ ಎಂದರು. ಅಷ್ಟರಲ್ಲೇ ಕೆಲವರು ಕಲ್ಲು ತೂರಿದರು. ಆ ಕ್ಷಣದಲ್ಲಿ ಮಿಂಚಿನಂತೆ ನಾರಾಯಣ ಅವರು ತಮ್ಮ ರಿವಾಲ್ವಾರನ್ನು ಶಾಸಕರ ಮುಖಕ್ಕೆ ಹಿಡಿದು, ನಿಮ್ಮ ಜನಕ್ಕೆ ಹೇಳಿ, ಅವರು ಇನ್ನು ಒಂದೇ ಒಂದು ಕಲ್ಲು ತೂರಿದರೆ ನನ್ನ ರಿವಾಲ್ವಾರಿನಿಂದ ಗುಂಡಿನ ಸುರಿಮಳೆ ನಿಮ್ಮ ದೇಹದ ಮುಖಾಂತರ ಆಗುತ್ತದೆ ಎಂದು ಗುಡುಗಿದರು. ಶಾಸಕ ವೀರಕುಮಾರ ಪಾಟೀಲ ತರಗುಟ್ಟಿದರು. ಅವರು ಏನೆಲ್ಲ ಸಮಜಾಯಿಸಿದರೂ ಎಸ್.ಪಿ.ನಾರಾಯಣ ಅವರು ಕೇಳಲಿಲ್ಲ. ಕೊನೆಗೆ ಶಾಸಕರು ಕೈ ಎತ್ತಿ, ಕಲ್ಲು ತೂರಬಾರದು. ಎಲ್ಲರು ಅಲ್ಲಿಂದ ಕದಲುವಂತೆ ಮನವಿ ಮಾಡಿಕೊಂಡರು. ಆಗ ನಾರಾಯಣ ಅವರು ತಮ್ಮ ರಿವಾಲ್ವಾರ ಹಿಂದಕ್ಕೆ ತೆಗೆದುಕೊಂಡರು. ಕೊಲೆಗೆ ಎತ್ನ ಎಂದೆಲ್ಲ ಶಾಸಕರು ಹಾರಾಡಿದರು. ಆದರೆ ಏನೂ ಪ್ರಯೋಜನ ಆಗಲಿಲ್ಲ.
ಮುಂದೆ ಇದೇ ವೀರಕುಮಾರ ಪಾಟೀಲ ಅವರು ಎಂ.ಇ.ಎಸ್.ಸಹವಾಸವನ್ನೇ ತೊರೆದು ಕಾಂಗ್ರೆಸ್ ಪಕ್ಷ ಸೇರಿದರು. ರಾಜ್ಯ ಸರಕಾರದಲ್ಲಿ ಸಚಿವರಾದರು. ನಿಗಮದ ಅಧ್ಯಕ್ಷರಾಗಿ ಕೆಲಸ ಮಾಡಿದರು. ಯಾರು ರಾಜ್ಯ ಸರಕಾರದ ವಿರುದ್ಧ ಶೆಡ್ಡು ಹೊಡೆದು ನಿಂತಿದ್ದರೋ ಅವರೇ ಮುಂದೆ ಅದೇ ಸರಕಾರದ ಸಚಿವರಾಗಿ ಕೆಲಸ ಮಾಡಿದರು. ಅವರು ಕುಟುಂಬದ ಸದಸ್ಯರು ಕರ್ನಾಟಕದ ಪ್ರಮುಖ ವಾಹಿನಿಗೆ ಬಂದು ಬಿಟ್ಟಿದ್ದಾರೆ. ಆದರೆ ಒಂದು ಕಾಲಕ್ಕೆ ಅವರ ಅನುಯಾಯಿಗಳಾಗಿದ್ದವರು ಇಂದಿಗೂ ಇತ್ತ ಕರ್ನಾಟಕವೂ ಇಲ್ಲ. ಅತ್ತ ಮಹಾರಾಷ್ಟ್ರವೂ ಇಲ್ಲ. ಅತಂತ್ರ ಸ್ಥಿತಿಯಲ್ಲಿ ಇದ್ದಾರೆ. ಇದು ಎಂ.ಇ.ಎಸ್.ನ ಕೆಲ ಮುಖಂಡರ ಇನ್ನೊಂದು ಮುಖ ಅಷ್ಟೇ.
ಬದಲಾದ ಶರದ ಪವಾರ:ಒಂದು ಕಾಲಕ್ಕೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಲೇಬೇಕು ಎಂದು ಬೀದಿಗಿಳಿದು ಹೋರಾಟ ಮಾಡಿದವರಲ್ಲಿ ಈಗಿನ ಕೇಂದ್ರ ಸರಕಾರದ ಸಚಿವ ಶರದ ಪವಾರ ಅವರೂ ಒಬ್ಬರು.
೧೯೮೬ರಲ್ಲಿ ಕರ್ನಾಟಕದಲ್ಲಿ ಇರುವ ಎಲ್ಲ ಸರಕಾರಿ ಶಾಲೆಗಳಲ್ಲಿ ಬೋಧನೆ ಮಾಧ್ಯಮ ಕನ್ನಡ. ಎಲ್ಲರೂ ಕನ್ನಡ ಕಲಿಯಬೇಕು ಎಂದು ಕರ್ನಾಟಕ ಸರಕಾರ ಆದೇಶ ಹೊರಡಿಸಿತು. ಮರಾಠಿಗರು ಅದಕ್ಕೆ ಬಲವಾದ ವಿರೋಧ ಮಾಡಿದರು. ಹಿಂಸಾತ್ಮಕವಾದ ಚಳವಳಿ ನಡೆಸಿದರು. ಮಹಾರಾಷ್ಟ್ರದಲ್ಲಿನ ಎಲ್ಲ ರಾಜಕೀಯ ಪಕ್ಷಗಳ ಬೆಂಬಲ ಇತ್ತು. ವಿಚಿತ್ರವೆಂದರೆ ಇದರ ನೇತೃತ್ವವನ್ನು ಹೆಸರಾಂತ ಸಮಾಜವಾದಿ ಎಸ್.ಎಂ. ಜೋಶಿ ಅವರು ವಹಿಸಿದ್ದರು.
ಶರದ ಪವಾರ ಅವರು ಬೆಳಗಾವಿಯಲ್ಲಿ ತಮ್ಮ ಪಕ್ಷದ ಶಾಸಕರು, ಸಂಸದರ ಜೊತೆ ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ಸತ್ಯಾಗ್ರಹ ನಡೆಸುವವರು ಇದ್ದರು. ಇದು ರಾಜ್ಯ ಸರಕಾರಕ್ಕೆ ತೀರೆ ತಲೆನೋವಿನ ಸಂಗತಿಯಾಗಿತ್ತು. ಅಂದಿನ ಮುಖ್ಯಮಂತ್ರಿ ಮನವಿ ಮಾಡಿಕೊಂಡರೂ ಕೇಳದೇ ಗಡಿಭಾಗದಲ್ಲಿ ಪೊಲೀಸ್ ಸರ್ಪಗಾವಲನ್ನು ಭೇದಿಸಿ, ಗುಪ್ತಚರ ಇಲಾಖೆಗೆ ಸುಳಿವು ಸಿಗದಂತೆ ಬೆಳಗಾವಿ ನಗರದಲ್ಲೇ ಒಬ್ಬ ವಿಐಪಿ ಮನೆಯಲ್ಲಿ ಬಚ್ಚಿಟ್ಟುಕೊಂಡು ನಿಗದಿತ ಸಮಯಕ್ಕೆ ಸ್ಥಳಕ್ಕೆ ಬಂದು ಸತ್ಯಾಗ್ರಹ ನಡೆಸಿ ಮರಾಠಿಗರ ಚಳವಳಿಗೆ ಪುಷ್ಟಿಕೊಟ್ಟವರು. ಅಂತಹವರು ಮುಂದೆ ಕೆಲವು ವರ್ಷಗಳ ನಂತರ ಅವರು ಬೆಳಗಾವಿಯಲ್ಲಿ ಮರಾಠಾ ಬ್ಯಾಂಕಿನ ಬೆಳ್ಳಿ ಹಬ್ಬದ ಸಮಾರಂಭಕ್ಕೆ ಅತಿಥಿಯಾಗಿ ಬಂದಿದ್ದರು. ಆಗ ಅವರು ಮಾತನಾಡುತ್ತ. ಗಡಿ ಚಳವಳಿ ಹೆಸರಿನಲ್ಲಿ ನಡೆಸುತ್ತಿರುವ ಬಿಸಿನೆಸ್‌ನ್ನು ಬಂದ್ ಮಾಡಿ. ಬೆಳಗಾವಿ ಅಭಿವೃದ್ಧಿಗೆ ಗಮನಹರಿಸಿ ಎಂದು ಗುಡುಗಿದರು. ವೇದಿಕೆ ಮೇಲೆ, ಕೆಳಗೆ ಕುಳಿತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ ಮುಖಂಡರು, ಸದಸ್ಯರು ಬೆರಗಾಗಿ ಪರಸ್ಪರ ಮುಖ ನೋಡಿಕೊಳ್ಳಲಾರಂಭಿಸಿದರು.
ಇದರರ್ಥ ಇಷ್ಟೇ. ಬೆಳಗಾವಿಯಲ್ಲಿ ಎಂ.ಇ.ಎಸ್. ಮರಾಠಿ ಭಾಷಿಕ ಜನರ ಆಶಯದಂತೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಪ್ರಾಮಾಣಿಕ ಪ್ರಯತ್ನದ ಬದಲು, ರಾಜಕೀಯ ಹಿತಾಸಕ್ತಿ, ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬುದು ಕೂಡಾ ಪವಾರ ಅವರು ಮನಗಂಡು ಈ ರೀತಿ ಗುಡುಗಿದ್ದರು. ಇಷ್ಟೆಲ್ಲ ಅವರ ಸಾರ್ವಜನಿಕ ಸಮಾರಂಭದಲ್ಲೇ ಮರಾಠಿ ಮುಖಂಡರಿಗೆ ಛೀಮಾರಿ ಹಾಕಿದರು ಎಂ.ಇ.ಎಸ್.ನ ಬೆಳಗಾವಿ ಮುಖಂಡರು ಅಭಿವೃದ್ಧಿಪರ ಚಿಂತನೆ ಮಾಡುತ್ತಿಲ್ಲ.
ಹಾಗಾದರೆ ಶರದ ಪವಾರ ಅವರು ಈಗ ಗಡಿ ವಿಷಯದಲ್ಲಿ ಸುಮ್ಮನಿದ್ದಾರೆ ಎಂದು ಹೇಳುತ್ತಿಲ್ಲ.ಕೋರ್ಟಿನ ಅಂಗಳಕ್ಕೆ ವಿವಾದ ತಳ್ಳಿ ಅಲ್ಲಿ ಮರಾಠಿಗರಿಗೆ ನ್ಯಾಯಕೊಡಿಸುತ್ತೇವೆ ಎಂದು ಹೇಳಿ ಚಳವಳಿಯನ್ನು ಜಾರಿಯಲ್ಲಿ ಇಟ್ಟಿದ್ದಾರೆ.
ಈ ಲೇಖನ ಕನ್ನಡಪ್ರಭ ಸಾಪ್ತಾಹಿಕ - ೪ ನವೆಂಬರ್ ೨೦೦೭ರ ಸಂಚಿಕೆಯಲ್ಲಿ ಪ್ರಕಟವಾದದ್ದು.

Sunday, October 28, 2007

ಹುಲಿಯಪ್ಪ


ವನವೇ ಕಡಿಮೆಯಾಗಿರುವಾಗ ಜೀವಿಗಳೂ ಅದೇ ರೀತಿ ಕಡಿಮೆಯಾಗುತ್ತಿವೆ. ಅದೇನೇ ಇದ್ದರೂ ಮಲೆನಾಡು ಜನ, ಬಡುಕಟ್ಟು ಜನಾಂಗದಲ್ಲಿರುವ ಹುಲಿಯಪ್ಪ ದೇವರ ಕಲ್ಪನೆ ವಿಶಿಷ್ಟ. ದನ, ಜನರ ಒಳಿತಿಗೆ ಪಾರ್ಥಿಸುವುದೇ ಹುಲಿ(ಹುಲ್ ದೇವರು) ದೇವನ ಪೂಜೆಯ ಒಳಾರ್ಥ. ಕಾಡಿನ ರಾಜಾ ಹುಲಿ, ನಾಡಿಗೆ ಬಂದು ಹಿಂಸೆ ಮಾಡದಂತೆ ಹುಲಿಯ ಆರಾಧನೆ. ಮಲೆನಾಡಿನ ಹಲವೆಡೆ ಇರುವ ಪದ್ಧತಿ ವಿಶಿಷ್ಟ.

ವಿಘ್ನ ಉಂಟುಮಾಡುವರನ್ನು ಸಂಪ್ರೀತಗೊಳಿಸಿ ವಿಘ್ನನಿವಾರಣೆ ಮಾಡುವುದು ಒಂದು ವಿಧ. ವಿಘ್ನ ಕಾರಣವನ್ನೇ ನಾಶ ಮಾಡುವುದು ಇನ್ನೊಂದು ಬಗೆ. ವ್ಯಾಘ್ರನ ವಿಘ್ನ ನಿವಾರಣೆಗೆ (ಹುಲಿಯನ್ನು) ಸಂಪ್ರೀತಗೊಳಿಸುವ, ಪೂಜೆ, ಪುನಸ್ಕಾರ ಸಲ್ಲಿಸುವ ಕ್ರಮ ನಮ್ಮದು. ಆದರೆ ಇಂದು ಹುಲಿ ನಾಶವಾಗಿದ್ದು ಬೇರೆಯದೇ ಕಾರಣಗಳಿಂದ. ಹುಲಿ ನಾಶಕ್ಕೆ ಕಾರಣ ಏನಿದ್ದರೂ ರಕ್ಷಣೆ ಕೋರಿ ವಿಶೇಷವಾಗಿ ರೈತರು, ಗ್ರಾಮೀಣ ಜನರು ಭಯದಿಂದ ಹುಲಿಗೆ ಪೂಜೆ ಸಲ್ಲಿಸುವ ಪದ್ಧತಿ ಮಲೆನಾಡಿನಲ್ಲಿದೆ.
ಯಾವ ವರ್ಷ ಊರಿನ ಪಕ್ಕವೇ ಹುಲಿ ಕಾಣಿಸಿಕೊಳ್ಳುತ್ತದೆಯೋ, ನಾಡಿಗೆ ಹುಲಿ ಬಂದು ದನ ಮುರಿದು ತಿನ್ನುತ್ತದೆಯೋ ಆವರ್ಷ ಹುಲಿ ದೇವರಿಗೆ ಪೂಜೆ ಸರಿಯಾಗಿಲ್ಲ. ಅಥವಾ ಮಾಡಿದ ಪೂಜೆಯಲ್ಲಿ ಏನೋ ತೊಂದರೆ ಇದೆ. ಹೀಗೊಂದು ನಂಬಿಕೆ ಮಲೆನಾಡಿನ ಜನರದ್ದು. ಹೀಗಾಗಿ ವರ್ಷವೂ ಹುಲಿ ಪೂಜೆ ನಡೆಯಲೇ ಬೇಕು.
ಊರ ಹೊರ ಭಾಗದ ಅರಣ್ಯ ಪ್ರದೇಶದಲ್ಲಿ ಹುಲಿ ದೇವರ ಪ್ರತಿಷ್ಠಾಪನೆ ಮಾಡಿ ಪೂಜಿಸುವುದು ಪಾರಂಪರಿಕ ಪದ್ಧತಿ. ಕಪ್ಪು ಕಲ್ಲಿನಲ್ಲಿ ಕೆತ್ತಿದ ಹುಲಿಯ ಮೂರ್ತಿಗೆ ಪೂಜೆ. ಎಲ್ಲ ಊರು, ಹೋಬಳಿ ಒಂದು ಹುಲಿ ದೇವರ ಕ್ಷೇತ್ರಕ್ಕೆ ಒಳಪಟ್ಟಿರುತ್ತದೆ. ಕೃಷಿಕರು, ಗ್ರಾಮೀಣ ಜನ ಆ ಹುಲಿ ದೇವರಿಗೆ ನಡೆದುಕೊಳ್ಳುತ್ತಾರೆ. ಅಥವಾ ಪೂಜೆ ಸಲ್ಲಿಸುತ್ತಾರೆ. ಕೆಲವೊಮ್ಮೆ ಹರಕೆ ಹೊತ್ತುಕೊಳ್ಳುವುದೂ ಇದೆ. ಹೀಗೆ ಮಾಡುವುದರಿಂದ ಹುಲಿ ಊರಿಗೆ ಬಂದು ಹೈನು(ಎಮ್ಮೆ, ಆಕಳು, ಹೋರಿ)ಗಳನ್ನು ಮುರಿದು ತಿನ್ನುವುದಿಲ್ಲ ಎಂಬ ಬಲವಾದ ನಂಬಿಕೆ ಅವರದ್ದು.
ಹುಲಿ ದೇವರಿಗೆ ಪ್ರತ್ಯೇಕ ದೇವಸ್ಥಾನವೂ ಶಿರಸಿ ತಾಲೂಕಿನ ತೈಲಗಾರಿನಲ್ಲಿದೆ. ಇಲ್ಲಿ ಹುಲಿ ದೇವರ ಕಾರ್ತಿಕವೂ ನಡೆಯುತ್ತದೆ. ಬಹುತೇಕ ಕಡೆ ಕಾಡಿನಲ್ಲಿ ಹುಲಿ ಮೂರ್ತಿ ಪ್ರತಿಷ್ಠಾಪಿಸಿ ಅದಕ್ಕೆ ಪೂಜೆ ಸಲ್ಲಿಸುತ್ತಾರೆ.
ಮನುಷ್ಯನಿಗೆ ಹುಲಿ ತೊಂದರೆ ನೀಡದಿದ್ದರು, ಕಾಡು, ಬೆಟ್ಟದಲ್ಲಿ ಮೇವು ಹುಡುಕಿಕೊಂಡು ಹೋಗುವ ಆಕಳು, ಎಮ್ಮೆಯ ಮೇಲೆ ಆಕ್ರಮಣ ಮಾಡುವುದು ಆಗಾಗ ನಡೆಯುತ್ತಿತ್ತು. ಹುಲಿಗೆ ಇದು ಸುಲಭದ ಬೇಟೆಯೂ ಆಗಿತ್ತು. ಊರಿನಲ್ಲಿ ಒಂದೆರಡು ದನಗಳು ವರ್ಷದಲ್ಲಿ ಹೀಗೆ ಹುಲಿಯ ಬಾಯಿಗೆ ತುತ್ತಾಗುತ್ತಿದ್ದವು.
ತೊಂದರೆ ಕೊಡದಂತೆ ಹುಲಿ ದೇವರ ಆರಾಧನೆ ಮಾಡುವುದು ಒಂದು ಕಾಲದಲ್ಲಿ ಹುಲಿಯ ಕಾಟ ಹೆಚ್ಚಿರುವುದನ್ನೂ ಹೇಳುತ್ತದೆ. ಆಚರಣೆಯ ಹಿಂದೆ ಇರುವ ಭಯ, ಭಕ್ತಿಯೂ ಇದನ್ನು ಹೇಳುತ್ತದೆ. ಹಾಗಂತ ಕಾಟ ಕೊಡದಂತೆ ಅಷ್ಟೇ ಪೂಜೆ ಸಲ್ಲಿಸುವುದಲ್ಲ. ಆದರೆ ಹುಲಿಯಿಂದ ಯಾವುದೇ ಜೀವ ಹಾನಿಯಾಗದಂತೆ ಬೇಡಿಕೊಳ್ಳವುದೇ ಹುಲಿ ಆರಾಧನೆಯ ಮುಖ್ಯ ಉದ್ದೇಶ. ಹಿಂದೂಗಳು ಹುಲಿಯಲ್ಲಿ ವಿಷ್ಣುವನ್ನು ಕಾಣುತ್ತಾರೆ. ಲಕ್ಷ್ಮಿಯ ವಾಹನವೂ ಹೌದು.
ಹುಲಿ ದೇವರ ಪೂಜೆ ಎಲ್ಲಿ ನಡೆಯುತ್ತದೆಯೋ ಆ ಪ್ರದೇಶದಲ್ಲಿ ಮೊದಲು ಹುಲಿ ವಾಸವಾಗಿತ್ತು ಎಂಬುದನ್ನು ಸೂಚಿಸುತ್ತದೆ. ಅಲ್ಲದೆ ಈ ಪ್ರದೇಶದಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಇತ್ತು ಎಂದರ್ಥ. ಇಂದು ಹುಲಿ ದೇವರಿರುವ ಪ್ರದೇಶ ನಗರ ಅಥವಾ ಜನ ವಸತಿ ಪ್ರದಶದಲ್ಲಿ ಸೇರಿದೆ ಎನ್ನುತ್ತಾರೆ ಶಿವಾನಂದ ಕಳವೆ.
ಉತ್ತರ ಭಾರತದಲ್ಲೂ ಬುಡಕಟ್ಟು ಜನಾಂಗದವರು ಹುಲಿ ದೇವರನ್ನು ಪೂಜಿಸುವ ಬಗ್ಗೆ ಉಲ್ಲೇಖಗಳಿವೆ. ಅಲ್ಲಿ ಹುಲಿ ದೇವರಿಗೆ ಬಾಘೇಶ್ವರ ಎಂದು ಕರೆಯುತ್ತಾರೆ.
ಟಿ ತೈಲಗಾರ:ಶಿರಸಿ ತಾಲೂಕಿನ ತೈಲಗಾರ ಬಳಿಯ ಹುಲಿ ದೇವರ ಜಾತ್ರೆ, ಪೂಜೆ ತಾಲೂಕಿಗೆ ಪ್ರಸಿದ್ಧ. ಇಲ್ಲಿ ಹುಲಿ ದೇವರಿಗೆ ವರ್ಷಕ್ಕೆ ಆರು ಪೂಜೆ. ಕಾರ್ತಿಕ ಮಾಸದ ಅಮಾವಾಸ್ಯೆಗೆ ವಿಶೇಷ ಪೂಜೆ, ಕಾರ್ತಿಕ ಆಚರಿಸುತ್ತಾರೆ. ಶಿರಸಿಯಿಂದ- ಹುಲೇಕಲ್ ವರೆಗೆ ಹುಲಿ ದೇವರ ಕ್ಷೇತ್ರ. ಸಾವಿರ ಮನೆಗಳು ಇಲ್ಲಿವೆ. ಕ್ಷೇತ್ರದಲ್ಲಿ ಹುಲಿಯಿಂದ ಯಾವುದೇ ತೊಂದರೆಯಾಗದಂತೆ ಪ್ರಾರ್ಥಿಸಿ, ಪೂಜೆ ಸಲ್ಲಿಸುತ್ತಾರೆ.
ಪಂಚಲಿಂಗ:ಶಿರಸಿ ತಾಲೂಕಿನ ಪಂಚಲಿಂಗ, ಸುತ್ತಲಿನ ಹತ್ತಾರು ಗ್ರಾಮಗಳು ಹುಲಿ ದೇವನಿಗೆ ದೀಪಾವಳಿಯಂದು ಪೂಜೆ ಸಲ್ಲಿಸುತ್ತಾರೆ. ದೇವಿಕಾನಿನಲ್ಲಿರುವ ಹುಲಿದೇವರಲ್ಲಿ ಕ್ಷೇತ್ರದಲ್ಲಿ ಹುಲಿಯಿಂದ ತೊಂದರೆಯಾಗಂದೆ ಒಟ್ಟಾಗಿ ಪ್ರಾರ್ಥಿಸುತ್ತಾರೆ.
ಕಂಚೀಕೈ :(ಸಿದ್ದಾಪುರ ತಾಲೂಕು) ಕಡಕಾರ, ಕಂಚಿಕೈ, ಅಸಬಾಳ, ಬನ್ನಿಮನೆ ಸೇರಿದಂತೆ ಇತರ ಗ್ರಾಮಗಳು ಕಡಕಾರ ಹುಲಿ ದೇವನಿಗೆ ಭಕ್ತರು. ಪ್ರತಿ ವರ್ಷ ದೀಪಾವಳಿಯಿಂದು ಹುಲಿ ದೇವರಿಗೆ ಪೂಜೆ. ಹಬ್ಬದ ದಿನ ಕಲ್ಲಿನ ಹುಲಿ ದೇವರನ್ನು ಶೃಂಗರಿಸುತ್ತಾರೆ. ಪ್ರತಿ ದನಕ್ಕೆ ಒಂದು ಕಾಯಿ ಅಥವಾ ಕೊಟ್ಟಿಗೆಯಲ್ಲಿ ಎಷ್ಟು ಹೈನು ಇದೆಯೆ ಅಷ್ಟು ತೆಂಗಿನ ಕಾಯಿಯನ್ನು ಹುಲಿ ದೇವರಿಗೆ ಇಟ್ಟು ಪೂಜಿಸಿ, ಒಡೆಯುತ್ತಾರೆ. ಪ್ರತಿ ವರ್ಷ ಎಲ್ಲ ಮನೆಯೂ ಸೇರಿ ಸುಮಾರು ೧,೪೦೦ಕ್ಕೂ ಹೆಚ್ಚು ತೆಂಗಿನ ಕಾಯಿ ಒಡೆದು ಪೂಜೆ ಸಲ್ಲಿಸುತ್ತಾರೆ. ಕಾಯಿ ಒಡೆಯಲು ಪ್ರತ್ಯೇಕ ಸ್ಥಳವೇ ಇಲ್ಲಿದೆ. ಹೀಗೆ ಮಾಡುವುದರಿಂದ ಹುಲಿ ಗ್ರಾಮಕ್ಕೆ ಬಂದು ದನ ಕರುಗಳನ್ನು ತಿನ್ನುವುದಿಲ್ಲ. ಮನುಷ್ಯರಿಗೂ ತೊಂದರೆ ಮಾಡುವುದಿಲ್ಲ ಎಂಬುದು ಇಲ್ಲಿನ ಆಚರಣೆಯ ಹಿಂದಿರುವ ನಂಬಿಕೆ.
ಕಡಕಾರ ಗೋಪಾಲ ಹೆಗಡೆ ಹೇಳುವ ಅನುಭವ ಕೇಳಿ: ಸುಮಾರು ೨೦ ವರ್ಷಗಳ ಹಿಂದೆ ರಾತ್ರಿ ಊರಿನ ಪಕ್ಕ ಹುಲಿ ಬಹು ಕಾಲ ಘರ್ಜಿಸುತ್ತಿತ್ತು. ಊರಿನವರಿಗೆ ಏನು ಮಾಡುವುದೆಂದು ತೋಚಲಿಲ್ಲ. ನಾಲ್ಕಾರು ಮಂದಿ ಸೇರಿ ಕಲ್ಲಿನ ಹುಲಿ ದೇವರು ಇರುವ ಸ್ಥಳಕ್ಕೆ ಹೋದರು. ಮರದ ಟೊಂಗೆ ಕಲ್ಲು ಹುಲಿ ಮೇಲೆ ಬಿದ್ದಿತ್ತು. ಇದಕ್ಕೆ ಹುಲಿ ಘರ್ಜಿಸುತ್ತಿತ್ತು. ಟೊಂಗೆ ತೆಗೆದ ಮೇಲೆ ಹುಲಿ ಘರ್ಜನೆ ನಿಂತಿತ್ತು.
ಆದರೆ ಇಂದು ಹುಲಿ ಸಂಖ್ಯೆಯೇ ಕಡಿಮೆಯಾಗುತ್ತಿದೆ. ಅಭಯಾರಣ್ಯ, ಸಂರಕ್ಷಿತ ಅರಣ್ಯ ಅಥವಾ ಪ್ರಾಣಿಸಂಗ್ರಹಾಲಯದಲ್ಲಿಯೇ ಬಹುತೇಕ ಹುಲಿಗಳಿವೆ. ಸ್ವಚ್ಛಂದವಾಗಿ ಕಾಡಿನಲ್ಲಿ ಓಡಾಡಿಕೊಂಡು ಇರುವ ಹುಲಿಗಳ ಸಂಖ್ಯೆ ತೀರಾ ಕಡಿಮೆ. ಅದರಲ್ಲೂ ನಾಡಿಗೆ ಹುಲಿ ಲಗ್ಗೆ ಇಡುವುದು ಇಲ್ಲವೇ ಇಲ್ಲ. ನರ ಭಕ್ಷಕ ಹುಲಿ ಹೊಡೆಯಲು ಜಿಮ್ ಕಾರ್ಬೆಟ್ ಅಂತಹವರೂ ಬೇಕಾಗಿಲ್ಲ. ಮೊದಲಿನಂತೆ ಹುಲಿ ಇಲ್ಲ ಎಂದು ಗ್ರಾಮೀಣ ಜನ ಹುಲಿ ದೇವರಿಗೆ ಪೂಜೆ ಸಲ್ಲಿಸುವುದನ್ನೇನೂ ನಿಲ್ಲಿಸಿಲ್ಲ. ಹುಲಿ ಎಲ್ಲೇ ಇರಲಿ, ತೊಂದರೆಯಾಗದಿರಲಿ ಎಂದು ಮೊದಲಿನಂತೆ ಇಂದಿಗೂ ಕಲ್ಲಿನ ಹುಲಿಯಪ್ಪನ ಮೂರ್ತಿಗೆ ಪೂಜೆ ಮಾಡುತ್ತಾರೆ. ಹುಲಿ ದೇವರ ಪೂಜೆ ಒಂದು ಸಂಪ್ರದಾಯ. ಅದೊಂದು ಆಚರಣೆ.



ಹುಲಿಗಳೆಷ್ಟು? :ದೇಶದಲ್ಲಿ ಐದು ದಶಕಗಳ ಹಿಂದೆ ೫೦ ಸಾವಿರದಷ್ಟು ಹುಲಿಗಳಿದ್ದವು. ೨೦೦೧ರಲ್ಲಿ ನಡೆಸಲಾದ ಹುಲಿ ಗಣತಿ ಪ್ರಕಾರ ದೇಶದಲ್ಲಿ ಒಟ್ಟು ೩೬೪೨ ಹುಲಿಗಳಿವೆ. ಈ ಪೈಕಿ ಮಹಾರಾಷ್ಟ್ರದಲ್ಲಿ ೭೧೦ ಹುಲಿ ಇದ್ದರೆ ರಾಜ್ಯದಲ್ಲಿ ೪೦೧ ಹುಲಿಗಳಿದ್ದವು.
ಹೊಡೆದದ್ದೆಷ್ಟು ? : ನೈಜ ಲೆಕ್ಕೆ ಸಿಗುವುದು ಅಸಾಧ್ಯದ ಮಾತು. ಆದರೆ ೧೯೯೯ ಮತ್ತು ೨೦೦೩ರ ಅವಧಿಯಲ್ಲಿ ೧೧೪ ಹುಲಿ ಬೇಟೆಯಾಡಲಾಗಿದೆ ಎಂದು ೨೦೦೫ರಲ್ಲಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಒಟ್ಟು ೧೭೩ ಹುಲಿಗಳು ಸತ್ತಿದ್ದು ಈ ಪೈಕಿ ೫೯ ಹುಲಿಗಳು ಸಹಜವಾಗಿ ಸತ್ತಿದ್ದವು.
ರಾಜಸ್ಥಾನದ ಸಾರಿಸ್ಕಾ ಅಭಯಾರಣ್ಯದ ಎಲ್ಲ ಹುಲಿಗಳ ಸಾವು ಇಂದಿಗೂ ನಿಗೂಢ. ದಾಖಲೆ ಪ್ರಕಾರ ಅಲ್ಲಿ ೧೮ ಹುಲಿಗಳಿದ್ದವು. ಆ ಪೈಕಿ ಎರಡು ಹುಲಿಗಳು ಸಹಜವಾಗಿ ಸತ್ತಿದ್ದವು. ಉಳಿದ ಹುಲಿಗಳು ಏನಾದವು ಎಂಬುದೇ ಪತ್ತೆಯಾಗಲಿಲ್ಲ.
ಕರ್ನಾಟಕದ ದಾಂಡೇಲಿಯ ಅಣಶಿ ಸೇರಿದಂತೆ ದೇಶದ ಏಳು ಪ್ರದೇಶದಲ್ಲಿ ವ್ಯಾಘ್ರ ಸಂರಕ್ಷಣಾ ವಲಯ ಅಭಿವೃದ್ಧಿ ಪಡಿಸಲು ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯ ಒಪ್ಪಿದೆ. ಇದರೊಂದಿಗೆ ದೇಶದಲ್ಲಿ ೩೫ ವ್ಯಾಘ್ರ ಸಂರಕ್ಷಣಾ ವಲಯಗಳಾಗಲಿದೆ.

‘ಬೆಟ್ಟಣ್ಣೆ’
ಈ ಲೇಖನ ಕನ್ನಡಪ್ರಭ ಸಾಪ್ತಾಹಿಕ ಅಕ್ಟೋಬರ್ ೨೦೦೭ರ ಸಂಚಿಕೆಯಲ್ಲಿ ಪ್ರಕಟವಾದದ್ದು.

Tuesday, October 23, 2007

ಜೋಳಿಗೆ ಜಾಥ

ಅನ್ನ ಇಲ್ಲ, ಹೊನ್ನಿಲ್ಲ
ಹೆಗಲಿಗೊಂದು ಜೋಳಿಗೆ
ಹೀಗೆ ಅಲೆಯುತಿರಲು..
ಹಾಕಿದೆ ಜೋಳಿಗೆ ತುಂಬ
ಜೀವ ಜತನಕೆ ಸಾಕಾಗುವಷ್ಟು
ಪ್ರೀತಿ, ವಾತ್ಸಲ್ಯ.

ಕೊಟ್ಟದ್ದನ್ನೆಲ್ಲ ಅವಚಿಕೊಂಡು
ಕಟ್ಟುತಿಹೆನು ಹಸನಾದ ಬದುಕಿನ ಕನಸ.
ಜೋಳಿಗೆಯೊಳಗನ ಪ್ರೀತಿ, ವಾತ್ಸಲ್ಯ
ಬತ್ತಿಲ್ಲ ಬಾಡಿಲ್ಲ, ಹಾಡಾಗಿ ಅರಳಿವೆ.

ನಿದ್ರೆ ಬಾರದ ರಾತ್ರಿಗಳಲಿ ನೀನ್ಹೇಳಿದ ಕತೆ
ಇತಿಹಾಸ ಹಾಸು, ಹೊಚ್ಚಾಗಿ
ಜೋಗಳ ಹಾಡ್ಯಾವ ತಾಯಿ
ಗಟ್ಟಿಗೊಳಿಸಾವ ಕನಸ.

ಇಟ್ಟಿಟ್ಟ ಹೆಜ್ಜೆಗೆ ಮೆಟ್ಟಲಾಗಾಂವ
ನಿನ ಪ್ರೀತಿ ವಾತ್ಸಲ್ಯ.
ಒಟ್ಟೊಟ್ಟಿಗೆ ನಾಗಲೋಟವಾಗಿ
ಲಗಾಮು, ಲಂಗುರವಾಗಿ
ಕಾಪಾಡ್ಯಾವ ಕರುಣದಿ.