Sunday, February 10, 2008

ಮಗಳು ತಾಯಿ ಇದ್ಹಾಂಗ

ಎಚ್.ಗೋಪಿಕಾ(ಗೋವಿಂದ ಮಡಿವಾಳರ)

ಶಾರದಿ ಇವತ್ತು ಏನಾತು ಅಂದ್ರೆ...
ನನ್ಮಗಳು ಗೌರಿ ಇದ್ದಾಳಲ್ಲ. ಸ್ಕೂಟರ್ ತಂದು ಮನೆಮುಂದ ನಿಲ್ಲಿಸಿ ಅಮ್ಮ ಬೇಗೆ ರೇಡಿಯಾಗು ದೇವಸ್ಥಾನಕ್ಕೆ ಹೋಗೋಣ ಅಂದ್ಲು. ಜೀವನದಲ್ಲಿ ಪ್ರಥಮ ಬಾರಿಗೆ ಇಂತಹ ಒಂದು ಮಾತು ಕೇಳಿ ಅದೆಂತಹ ಖುಷಿ ಅಯಿತು ಅಂತಿಯಾ?...
ಮೆಂತೆಪಲ್ಲೆ ಸೋಸುವುದನ್ನು ಬಿಟ್ಟು ಸರ ಸರಾಂತ ಮನೆತುಂಬಾ ಓಡಾಡಿ ತಯಾರಾದೆ. ಇವರು ಕಂಪ್ಯೂಟರ್ ಮುಂದೆ ಕೂತು ಅದೇನೋ ಟೈಪ್ ಮಾಡ್ತಾ ಇದ್ದರು. ದೇವಸ್ಥಾನಕ್ಕೆ ಹೋಗ ಬರ್‍ತೇನ್ರಿ, ಮನೆಕಡೆ ಜೋಕಿ, ಜಿಮ್ಮಿ ಬಾಗಲದಾಗ ಮಲಗೇತಿ ಎಂದು ಹೇಳುತ್ತಾ ಅವರ ಅನುಮತಿಗೂ ಕಾಯದೇ ಮಗಳೊಂದಿಗೆ ಮನೆ ಗೇಟ್ ತಡಾದು ರಸ್ತೆಗೆ ಬಂದು ಸ್ಕೂಟರ್ ಸೀಟು ತಡವುತ್ತ ನಿಂತೆ....
ಮಗಳು ‘ಯವ್ವಾ ಬೇ’ ಗಾಡಿ ಹತ್ತಬೇ ಎಂದಾಗ, ಸ್ಕೂಟರ್ ಆಗಲೇ ಚಾಲು ಆಗಿತ್ತು. ಹತ್ತಿ ಕುಳಿತೆ. ಮಗಳು ನನ್ನ ಕೈ, ತನ್ನ ಹೆಗಲ ಮೇಲೆ ಇಟ್ಕೊಂಟು ಗಾಡಿ ಹೊಡೆಯುತ್ತಿರುವಾಗ ನಮ್ಮ ಗೌರಿ ನನಗ ಪೈಲಟ್ ತರಹ ಕಂಡಳು. ಖರೆ ಖರೆ ಹೇಳಬೇಕಂದ್ರ ಅಲ್ಲಿ ತಾಯ್ತನದ ಸ್ಪರ್ಷ ಅದ್ಹಾಂಗ ಆತು. ಮಗುವಿನ ತರಹ ಹಾಗೇ ಕುಳಿತೆ. ಅಷ್ಟು ಜನ ಗಂಡ್ಸೂರು ಗಾಡಿ ಓಡಿಸುವ ಮಧ್ಯೆ ಗೌರಿ ಗಾಡಿನ.. ಜೋರದ ಅನಿಸ್ತು ನೋಡು. ದೇವಸ್ಥಾನದ ಬಳಿ ಗಾಡಿ ನಿಂತಾಗ ಗಾಡಿಯಿಂದ ಇಳಿದ ಮಗಳ ಕೈ ಕೈಯಾಗ ತಗೊಂಡು ಸಣ್ಣಗ ಅದುಮಿ ಕೃತಜ್ಞತೆ ಸಲ್ಲಿಸಿದೆ.
ನನ್ನ ಮಗ ರವಿ ಎಂದೂ ಒಂದು ದಿನ ಹೀಂಗ ಸ್ಕೂಟರ್ ಮೇಲೆ ಕರದ ಕುಡ್ರಿಸಿಕೊಂಡು, ಆತ್ಮಿಯತೆಯಿಂದ ಕರಕೊಂಡು ಹೋದದ್ದು ನೆನಪೇ ಇಲ್ಲ. ಎಲ್ಲೆರ ಅರ್ಜೆಂಟ್ ಹೋಗದಿದ್ರ ಸ್ವಲ್ಪ ಗಾಡಿ ಮೇಲೆ ಬಿಟ್ಟು ಬಾರೋ ರವಿ ಅಂದ್ರ, ಅಮ್ಮ ನೀವು ಹೆಣ್ಮಕ್ಕಳು ಲಗೂನ ತಯಾರ ಆಗ್ಹೋಂಗಿಲ್ಲ. ನಾ ನನ್ನ ಫ್ರೆಂಡ್ಸ್‌ಗೆ ಬೇಗ ಬರ್‍ತೇನಿ ಅಂತಾ ಹೇಳೇನಿ ನೀನು ರಿಕ್ಷಾ ಮಾಡಿಕೊಂಡು ಹೋಗು ಅಂತಾ ಹೇಳ್ತಾನ. ತಾಯಿ ಮಾತಗಿಂತ ಗೆಳೆಯರ ಮಾತ ಜಾಸ್ತಿಯೇನೋ ಅಂತ ಗದರಿಸಿದ್ರ ಗೊಣಗಾಡಿಕ್ಕೊಂತ ಕರ್‍ಕೊಂಡು ಹೋಗ್ತಾನ. ಮರಳಿ ಬರಬೇಕಾದ್ರ ಮತ್ತ ನಾನು ಬಸ್ಸೋ, ರಿಕ್ಷಾದಾಗೋ ಬರಬೇಕು. ಗೌರಿ ಹಂಗಲ್ಲ. ಕರ್‍ಕೊಂಡು ಹೋಗಿ ನನ್ನ ಜತೆಗೆ ಕೆಲಸ ಮುಗಿಯುವ ತನಕ ಇದ್ದು ಜತನದಿಂದ ಕರಕೊಂಡು ಬರ್‍ತಾಳ.
ನೋಡೇ ಶಾರದಿ ನಾವು ಹತ್ತು ದೇವರಿಗೆ ಹರಕಿ ಹೊತ್ತ ಜನ್ಮ ನೀಡಿದ ಗಂಡಸು ಮಗನಿಗೂ, ಬೇಡದ ಮನಸಿನಿಂದ ಜನ್ಮ ನೀಡುವ ಹೆಣ್ಣು ಮಗುವಿಗೂ ಇರುವ ಅಂತರ. ನನಗ ಅನಸ್ತದ ಯಾತಕವ್ವ ಈ ಪರಿ ಗಂಡು ಸಂತಾನಕ್ಕೆ ಹಪಹಪಿ ಮಾಡೋದು ಅಂತಾ.
ಸ್ಕೂಟರ್ ಮೇಲೆ ಹತ್ತಿಸ್ಕೊಂಡು ಹೋದ ಕೂಡ್ಲೆ ಮಗಳ ಮೇಲೆ ಅಷ್ಟು ಪ್ರೀತಿ ಉಕ್ಕಿತಾ ಅಂತಾ ಅನ್ಕೋಬ್ಯಾಡ. ಅಕಿಗೆ ನೌಕರ ಸಿಕ್ಕಾಗನಿಂದ ನೋಡ್ತೇನಿ...
ಅವ್ವಾ ಇವತ್ತು ಸಂಜೆ ಸ್ವಲ್ಪ ಬೇಗ ಸಜ್ಜಾಗಿರು. ನಾನು ಬೇಗ ಬರ್‍ತೇನಿ. ಇಬ್ಬರು ದೇವಸ್ಥಾನಕ್ಕ ಹೋಗಿ ಹಂಗ ಬಜಾರದಾಗ ಅದೇನ ಹೇಳಿದ್ದೆಲ್ಲ ಅದನ್ನ ತರೋಣ ಅಂತಾ ಫೋನ್ ಮಾಡ್ತಾಳ. ಕರಕೊಂಡೂ ಹೋಗ್ತಾಳ. ಅವ್ವ ನಿನಗ ಈ ಕಾಟನ್ ಸೀರೆ ಮನ್ಯಾಗ ಉಟ್ಕಾಳಕ್ಕ ಛೋಲಾ ಆಗ್ತದಲ್ಲ ಅಂತಾ ಖರೀದಿ ಮಾಡ್ತಾಳ...
ಒಂದದಿನ ಏನಾಯ್ತಿ ಅಂದ್ರ. ಹೀಂಗ ಬಜಾರಕ್ಕ ಹೋದಾಗ ಒಂದು ಜಾಕೆಟ್ ಮತ್ತು ಮಾಪ್ಲರ್ ತಗೊಂಡ್ಲು. ಮನೆಗೆ ಬಂದು ಗಾರ್ಡನ್‌ನಾಗ ಹೂವಿನ ಗಿಡಕ್ಕ ನೀರು ಹಾಕುತ್ತಿದ್ದ ಅವರಪ್ಪನ್ನ ಒಳಗ ಕರೆದು ಪ್ಲ್ಯಾಸ್ಟಿಕ್ ಬ್ಯಾಗ್ ಕೈಗೆ ಕೊಟ್ಲು. ಅದನ್ನ ಬಿಚ್ಚಿನೋಡಿದವ್ರ, ‘ಪಾರ್ವತಿ ಪಡ್ಕೊಂಡ ಬಂದ ಪುಣ್ಯ ಅಂದ್ರ ಇದ ನೋಡ. ಇಂತಹ ಮಗಳ್ನ ಬೆಳಸಿದೆಲ್ಲಾ ನಿನಗ ತುಂಬಾ ಥ್ಯಾಂಕ್ಸ್, ಅಂತಾ ಹೇಳಿ ನನ್ನ ಮೂಗ ಜಗ್ಗಿದರು. ಗೌರಿ ಹೋ.. ಅಂತಾ ನಗೆಯಾಡಿದಳು. ನನಗರ ನಾಚಿಕ ಬಂದು ತಲೆ ತಗ್ಗಿಸಿದೆ.
ಮೊದಲ ಬಾರಿ ನೋಡಿದಾಗ ನೀ ಇಷ್ಟೊಂದು ನಾಚಿಕೊಂಡಿರ್‍ಲಿಲ್ಲ ನೋಡ್ ಪಾರ್ವತಿ. ಬಾಳ ಚಂದ ಕಾಣ್ತಿ ಅಂದಬಿಟ್ರು. ಇಂತಹ ಮಧುರ ಕ್ಷಣಗಳನ್ನು ಮೊಗ ಮೊಗದು ನೀಡುತ್ತಿರುವ ಮಗಳು ಗೌರಿಯಿಂದಾಗಿ ನನ್ನ ಆರೋಗ್ಯ ಕೂಡಾ ಸುಧಾರ್‍ಸೆದ.
ಆದ್ರ ಈ ಕ್ಷಣಗಳು ಕೊನೆ ತನಕ ಅಲ್ಲ ಅಂಬೋದು ಗೊತ್ತು. ಆಕೆ ಮದುವೆಯಾಗಿ ಗಂಡನ ಮನೆಗೆ ಹೋದ್ರ, ಇವೆಲ್ಲ ಬರೀ ನೆನೆಪು. ಆದ್ರ ನಮ್ಮ ಬದುಕಿನ ಬುತ್ತಿಯಲ್ಲಿ ಮಧುರ ಕ್ಷಣಗಳು ಇರ್‍ತಾವಲ್ಲ. ಆಗಾಗ ಬಿಚ್ಚಿ ಸವಿಯಬಹುದಲ್ಲ. ಈ ಬದುಕಿಗೊಂದಿಷ್ಟು ಇರಲಿ ಮಧುರ ಕ್ಷಣಗಳು ಅಂತಾರಲ್ಲ ಹಂಗವಾ.
ಶಾರದಿ ಇವ್ರು ಆಫೀಸಿನಿಂದ ಬಂದ್ಹಾಂಗ ಆತು ಚಹ ಮಾಡಬೇಕು. ನೀ ಬಿಡುವು ಮಾಡ್ಕೊಂಡು ಫೋನ್ ಮಾಡಲ್ಲ. ನಾ ಫೋನ್ ಬಂದ್ ಮಾಡ್ತೇನೆವಾ....





ಈ ಲೇಖನ ಕನ್ನಡಪ್ರಭ ಪತ್ರಿಕೆಯ ಸಖಿ ಪುರವಣಿಯಲ್ಲಿ ಫೆಬ್ರವರಿ ತಿಂಗಳಲ್ಲಿ ಪ್ರಕಟವಾಗಿದೆ.

ಡಬ್ಬಾವಾಲಾಗಳ ಕಮಾಲ್......

ಗೋವಿಂದ ಮಡಿವಾಳರ
ಅಂತೋದ್ಯ ಅಂದರೆ ಆರ್ಥಿಕವಾಗಿ ತೀರಾ ಕೆಳಸ್ತರದಲ್ಲಿ ಇರುವವರನ್ನು ಉದ್ಧಾರ ಮಾಡಬೇಕು. ಅಥವಾ ಉದ್ಯೋಗ ಸೃಷ್ಟಿಸುವುದು ಹೇಗೆ ಎಂದು ರಷ್ಯಿಯಾದ ಲೇಖಕ Ruskin ಬರೆದಿರುವ Small is beautiful ಅಥವಾ ಅದೇ ಪುಸ್ತಕವನ್ನು ಗಾಂಧೀಜಿ ಅವರು ಹಿಂದಿಗೆ ‘ಸರ್ವೋದಯ’ ಎಂದು ಅನುವಾದಿಸಿರುವ ಪುಸ್ತಕವನ್ನು ನಾವು ಓದಬೇಕಾಗಿಲ್ಲ. ತೀರಾ ಸಾಮಾನ್ಯ ಜೀವನಮಟ್ಟದವರ ಉದ್ಧಾರ ಹೇಗೆ ಆಗಬಹುದು ಎಂಬುದನ್ನು ಅರಿಯಬೇಕಾದರೆ ಅದಕ್ಕೆ ಎಂ.ಬಿ.ಎ. ಮಾಡಿ, ಸಂಶೋಧಯನ್ನೂ ಮಾಡಬೇಕಾಗಿಲ್ಲ. ಪಾಂಡಿತ್ಯ ಬೇಕಾಗಿಲ್ಲ. ಮುಂಬಯಿ ನಗರದಲ್ಲಿ ಇರುವ ಡಬ್ಬಾವಾಲಾಗಳ ಬದುಕೇ ಒಂದು ದೊಡ್ಡ ಪ್ರಯೋಗ.
ಇನ್ನು ಕುತೂಹಲದ ಸಂಗತಿ ಅಂದರೆ ೨೦೦೭ರ ಅಂತದ ವೇಳೆಗೆ ಬೆಳಗಾವಿ ನಗರದ ಲಿಂಗರಾಜ ಕಾಲೇಜಿನ ಬಿ.ಬಿ.ಎ.ವಿದ್ಯಾರ್ಥಿಗಳಿಗೆ ವ್ಯಾಪಾರ, ಆಡಳಿತ ಕುರಿತು ವಿಶೇಷ ಉಪನ್ಯಾಸ ನೀಡಲು ಅವರೇ ಬಂದಿದ್ದರು!. ಅಂದು ವಿದ್ಯಾರ್ಥಿಗಳಷ್ಟೇ ಅಲ್ಲ. ನಗರದ ಹಲವಾರು ವ್ಯಾಪಾರಿಗಳು, ಉಪನ್ಯಾಸಕರು ಪ್ರವೇಶ ಶುಲ್ಕ ಕೊಟ್ಟು ಡಬ್ಬಾವಾಲಾಗಳ ಅನುಭವ, ಕಾರ್ಯಶೈಲಿ ಕೇಳಲು ಹೋಗಿದ್ದರು.!!
ಅವರು ಅಂದು ನೀಡಿದ ಉಪನ್ಯಾಸದ ವಿಷಯ ‘ಸಾಮಾನ್ಯ ಜ್ಞಾನದ ಮೂಲಕ ವ್ಯವಸ್ಥಾಪನೆ’
ಮುಂಬಯಿ ನಗರದಲ್ಲಿ ಈ ಡಬ್ಬಾವಾಲಗಳ ಸಂಘಟನೆ ಆರಂಭವಾಗಿದ್ದು ಕೂಡಾ ತುಂಬಾ ಕುತೂಹಲಕಾರಿ ಸಂಗತಿ. ಮುಂಬಯಿ ನಗರದ ಬ್ಯಾಂಕ್ ಒಂದರಲ್ಲಿ ಅಧಿಕಾರಿಯಾಗಿದ್ದ ಪಾರ್ಸಿಯೊಬ್ಬ ಹೊಟೇಲ್ ಊಟಕ್ಕಿಂತ ಮನೆಯ ಊಟವನ್ನೇ ಹೆಚ್ಚು ಇಷ್ಟಪಡುತ್ತಿದ್ದ. ಹೀಗಾಗಿ ಕಚೇರಿಯಲ್ಲಿ ಊಟದ ವೇಳೆಗೆ ಮನೆ ಊಟ ತಂದು ಕೊಡಲು ಒಬ್ಬ ನೌಕರನನ್ನು ನೇಮಿಸಿಕೊಂಡ. ಆ ಡಬ್ಬಾವಾಲಾನಿಗೆ ಬ್ಯಾಂಕ್ ಅಧಿಕಾರಿ ನೀಡುವ ಸಂಬಳ ತೀರಾ ಕಡಿಮೆ ಅನಿಸಲಾರಂಭಿಸಿತು. ಕ್ರಮೇಣ ಡಬ್ಬಾವಾಲಾ ಆದೇ ಪ್ರದೇಶದಲ್ಲಿನ ವಿವಿಧ ಕಚೇರಿ, ಬ್ಯಾಂಕುಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಊಟದ ಡಬ್ಬಾ ತರುವ ಕೆಲಸವನ್ನು ವಹಿಸಿಕೊಂಡು ತನ್ನ ಆದಾಯ ಹೆಚ್ಚಿಸಿಕೊಂಡ. ಆದರೆ ಮುಂದೆ ದಿನಗಳದಂತೆ ಡಬ್ಬಾವಾಲಗಳ ಬೇಡಿಕೆ ಮುಂಬಯಿ ನಗರದಲ್ಲಿ ಹೆಚ್ಚಿಕೊಂಡಿತು. ಹೀಗಾಗಿ ಡಬ್ಬಾವಾಲಾಗಳ ಸಂಖ್ಯೆ ಕೂಡಾ ಕ್ರಮೇಣ ದಿನದಿಂದ ದಿನಕ್ಕೆ ಹೆಚ್ಚಿತು. ಆಗ ಯಾರು ಯಾವ ಪ್ರದೇಶದಲ್ಲಿ ಊಟದ ಡಬ್ಬಾ ಸಾಗಿಸಬೇಕು ಎಂಬ ಸಮಸ್ಯೆ ಉಂಟಾಯಿತು. ಅದಕ್ಕಾಗಿ ೧೮೯೦ರಲ್ಲಿ ಅವರು ಡಬ್ಬಾವಾಲಾಗಳ ಸಂಘ ರಚಿಸಿಕೊಂಡರು. ಸಂಘದ ಮೂಲಕ ಡಬ್ಬಾವಾಲಾಗಳು ಡಬ್ಬಾ ಸಾಗಿಸುವ ಕೆಲಸಕ್ಕಾಗಿ ವಿವಿಧ ಪ್ರದೇಶಗಳನ್ನು ಹಂಚಿಕೊಂಡರು.
ಈಗ ೫೦೦೦ ಡಬ್ಬಾವಾಲಾಗಳು ಇದ್ದಾರೆ. ಅವರು ೨ಲಕ್ಷ ನೌಕರರಿಗೆ ಅವರವರ ಮನೆಯಿಂದ ಊಟದ ಡಬ್ಬಾ ಸಂಗ್ರಹಿಸಿ ಕೇವಲ ೩ ಗಂಟೆಯೊಳಗೆ ಊಟದ ಡಬ್ಬಾಗಳನ್ನು ತಲುಪಿಸಬೇಕಾದ ಸ್ಥಳಕ್ಕೆ ಸರಿಯಾಗಿ ತಲುಪಿಸುತ್ತಾರೆ. ಊಟದ ಡಬ್ಬೆಗಳ ಮೇಲೆ ಹೆಸರು ಇರುವುದಿಲ್ಲ. ಕೇವಲ ಸಂಕೇತಗಳು ಇರುತ್ತವೆ. ಆ ಸಂಕೇತಗಳ ಮೂಲಕ ಸಂಬಂಧಿತರಿಗೆ ಸರಿಯಾದ ಸ್ಥಳಕ್ಕೆ ತಲುಪಿಸುತ್ತಾರೆ. ಈ ತನಕ ಊಟದ ಡಬ್ಬೆಗಳು ಅದಲಿಬದಲಿಯಾದ ಊದಾಹರಣೆಯೇ ಇಲ್ಲ. ಪ್ರತಿಯೊಬ್ಬರು ೨೦ರಿಂದ ೪೦ ಡಬ್ಬಾಗಳನ್ನು ಪ್ರತಿದಿನ ಸಾಗಿಸುತ್ತಾರೆ ಎಂದು ಡಬ್ಬಾವಾಲಾಗಳು ಹೇಳುತ್ತಾರೆ. ಇವರಲ್ಲಿ ಬಹುತೇಕರು ಅನಕ್ಷರಸ್ಥರು ಇದ್ದಾರೆ. ಇನ್ನು ಕೆಲವರು ತಕ್ಕಮಟ್ಟಿಗೆ ಶಿಕ್ಷಣ ಪಡೆದವರು ಇದ್ದಾರೆ. ಇಂತಹವರು ಪ್ರತಿದಿನ ೨ ಲಕ್ಷ ಜನರಿಗೆ ಯಾವುದೇ ತೊಂದರೆ ಇಲ್ಲದೇ ಊಟದ ಡಬ್ಬಾಗಳನ್ನು ನಿಗದಿತ ಸ್ಥಳಕ್ಕೆ ತಲುಪಿಸುತ್ತಾರೆ.
ಇಂದಿನ ಅಧುನಿಕ ದಿನದಲ್ಲೂ ತಮ್ಮ ತನ ಉಳಿಸಿಕೊಂಡಿದ್ದಾರೆ. ಅದೇ ಬಿಳಿ ಪೈಜಾಮು, ಬಿಳಿ ಹಾಫ್ ಶೆರ್ಟ್, ತಲೆ ಮೇಲೊಂದು ಬಿಳಿ ಟೊಪ್ಪಿಗೆ. ಅದು ಅವರು ಸಮವಸ್ತ್ರ ತರ ಇದೆ.
ಅವರೇ ಸ್ಥಾಪಿಸಿಕೊಂಡಿರುವ ಸಂಘದಲ್ಲಿ ಪ್ರತಿ ವರ್ಷ ೩೦ ಸಾವಿರ ಕೋಟಿ ರುಪಾಯಿ ವಹಿವಾಟು ನಡೆಯುತ್ತಿದೆ. ಸಂಘಕ್ಕೆ ಯಾರೂ ಮಾಲಿಕರು ಇಲ್ಲ. ಎಲ್ಲರೂ ನೌಕರರೇ. ಇಲ್ಲಿ ಎಲ್ಲರೂ ಶೇರುದಾರರು. ಪ್ರತಿಯೊಬ್ಬರು ಮಾಸಿಕ ೫ ಸಾವಿರ ರುಪಾಯಿಯನ್ನು ಸಂಬಳ ರೂಪದಲ್ಲಿ ಪಡೆಯುತ್ತಾರೆ. ಪ್ರತಿ ತಿಂಗಳು ೧೫ರಂದು ಸಭೆ ಸೇರಿ ಆ ತಿಂಗಳ ಆದಾಯ, ವೆಚ್ಚ ಕುರಿತು ಚರ್ಚಿಸುತ್ತಾರೆ. ಅವರ ಸಂಘವನ್ನು ‘ನೂತನ ಮುಂಬಯಿ ಟಿಫಿನ್ ಬಾಕ್ಸ್ ಸಪ್ಲಾಯರ್ಸ್ ಚಾರಿಟಿ ಟ್ರಸ್ಟ್’ ಎಂದು ರಚಿಸಿಕೊಂಡಿದ್ದಾರೆ. ಅವರಲ್ಲೇ ಒಬ್ಬರು ನಿಗದಿತ ಅವಧಿಗೆ ಅಧ್ಯಕ್ಷರು, ಕಾರ್ಯದರ್ಶಿ ಹೀಗೆ ಪದಾಧಿಕಾರಿಗಳು ಆಯ್ಕೆ ಆಗುತ್ತಾರೆ. ಅವರೆಲ್ಲ ಟ್ರಸ್ಟ್ನ ವ್ಯವಹಾರ ನೋಡಿಕೊಳ್ಳುತ್ತಾರೆ. ಕಳೆದ ೧೧೭ ವರ್ಷಗಳಿಂದ ಇದೇ ರೀತಿಯಾಗಿ ಶಿಸ್ತಿನಿಂದ ನಡೆದುಕೊಂಡು ಬಂದಿದೆ ಎಂದು ಡಬ್ಬಾವಾಲಾಗಳು ಹೇಳುತ್ತಾರೆ.
ಕುತೂಹಲದ ಸಂಗತಿ:ಇಷ್ಟೆಲ್ಲ ವ್ಯವಸ್ಥಿತವಾಗಿ, ಶಿಸ್ತಿನಿಂದ ಕಾರ್ಯನಿರ್ವಹಿಸುವ ಇವರು ಮೂಲತ ಶಿವಾಜಿ ಮಹಾರಾಜರ ಸೈನಿಕರಾಗಿದ್ದವರ ವಂಶಸ್ತರು ಎಂದು ಹೇಳಲಾಗುತ್ತಿದೆ. ಶಿವಾಜಿ ಮಹಾರಾಜರು ಸೈನ್ಯ ಕಟ್ಟಿದ್ದು ಕಾಡಿನಲ್ಲಿ. ಅಲ್ಲಿ ಒಂದು ಗುಂಪಿಗೆ ಸೇರಿದ ಜನರನ್ನು ಆಯ್ದು ಅವರಿಗೆ ಯುದ್ಧ ಕಲೆ ತರಬೇತಿ ನೀಡಿದ್ದರು ಎಂಬ ಇತಿಹಾಸ ಇದೆ. ಅವರು ತುಂಬಾ ಶ್ರಮಜೀವಿಗಳು, ನಿಷ್ಟಾವಂತರು ಎಂಬ ಕಾರಣಕ್ಕೆ ಶಿವಾಜಿ ಮಹಾರಾಜರು ಈ ಗುಂಪಿನ ಜನರನ್ನು ಆಯ್ಕೆ ಮಾಡಿದ್ದರು ಎಂದು ಹೇಳಲಾಗುತ್ತಿದೆ.
ಚಾರ್ಲ್ಸ್ ಭೇಟಿ:ಇವರು ಎಷ್ಟೊಂದು ಕೆಲಸ ನಿಷ್ಟರು ಎಂದರೆ ಈಗ್ಗೆ ಕೆಲವು ವರ್ಷಗಳ ಹಿಂದೆ ಬ್ರಿಟನ್ ರಾಜಕುಮಾರ ಚಾರ್ಲ್ಸ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮುಂಬಯಿಗೆ ಬಂದಿದ್ದರು. ಇವರ ಕಾರ್ಯಕ್ಷಮತೆ ಕೇಳಿ ಅವರನ್ನು ಭೇಟಿಯಾಗಲು ಇಚ್ಚೆ ವ್ಯಕ್ತಪಡಿಸಿದರು. ಆದರೆ ಡಬ್ಬಾವಾಲಾಗಳು ತಮ್ಮ ಕೆಲಸದ ವೇಳೆಯಲ್ಲಿ ಅವರ ಬಳಿ ಹೋಗಲು ನೀರಾಕರಿಸಿದರು. ತಾವು ನಿಗದಿಪಡಿಸುವ ವೇಳೆಗೆ ಭೇಟಿಯಾಗುವುದಾದರೆ ಭೇಟಿ ಆಗುತ್ತೇವೆ ಎಂದು ಡಬ್ಬಾವಾಲಗಳು ತಿಳಿಸಿದ್ದರು. ಅದಕ್ಕೆ ಒಪ್ಪಿಕೊಂಡ ರಾಜಕುಮಾರ ಚಾರ್ಲ್ಸ್, ಡಬ್ಬಾವಾಲಾಗಳು ಕೆಲಸ ಮುಗಿದ ನಂತರ ಅವರೇ ನಿಗದಿಪಡಿಸಿದ ಸಮಯದಲ್ಲಿ ಅವರನ್ನು ಭೇಟಿಯಾಗಿದ್ದರು. ಮುಂದೆ ಚಾರ್ಲ್ಸ್ ತನ್ನ ಮದುವೆ ಸಮಾರಂಭಕ್ಕೆ ಡಬ್ಬಾವಾಲಾಗಳಿಗೆ ವಿಶೇಷವಾಗಿ ಆಮಂತ್ರಣ ಪತ್ರ ಕಳಿಸಿ ಆಹ್ವಾನಿಸಿದ್ದರು. ಇದು ಕೂಡಾ ಅವರ ಕರ್ತವ್ಯ ಪ್ರಜ್ಞೆ ಮತ್ತು ಶಿಸ್ಸಿಗೆ ಸಂದ ಗೌರವ. ಇದು ಇತರರಿಗೆ ಮಾದರಿ ಕೂಡಾ.
ಚಾರ್ಲ್ಸ್ ಅವರು ಡಬ್ಬಾವಾಲಾಗಳನ್ನು ಭೇಟಿಯಾದ ನಂತರವೇ ಮುಂಬಯಿಯ ಡಬ್ಬಾವಾಲಾಗಳನ್ನು ಭಾರತೀಯರು ಗುರುತಿಸಿದರು ಎಂಬ ಸಂಗತಿ ಭಾರತೀಯರ ಪ್ರಜ್ಞೆಗೆ ಸಾಕ್ಷಿ.