Thursday, February 19, 2009

ಲವ್ ಬ್ರೈಟೋ, ಬ್ಲೈಂಡೋ......

ಅವತ್ತು ಬೆಳ್ಳಂಬೆಳಿಗ್ಗೆ ಓಡೋಡಿ ಬಂದು, ನನ್ನನ್ನು ತಡೆದು ನಿಲ್ಲಿಸಿದ ನಮ್ಮ ಭಜನೆ ಬಸವ, ಸರ್ ನನಗೆ ಒಂದು ಅನುಮಾನ ಅಂದ.
ಏನ ಬಸವ ಅದು. ಅಂತಹ ಅನುಮಾನ!
ಏನಿಲ್ಲ. ಲವ್ ಈಸ್ ಬ್ಲೈಂಡ್ ಅಂತಾರಲ್ಲ. ಅದು ಪೂರ್ಣ ಸತ್ಯ ಅಲ್ಲ. ಲವ್ ಈಸ್ ಬ್ರೈಟ್ ಅಂತಾ ನನಗೆ ಅನಿಸುತ್ತಿದೆ ನೀವೇನು ಅಂತಿರಾ? ಎಂದು ಸವಾಲು ಎಸೆದ.
ಬ್ಲೈಂಡ್ ಅಲ್ಲ... ಬ್ರೈಟ್!.... ಅದು ಹೇಗೆ?. ಲವ್ ಈಸ್ ಬ್ಲೈಂಡ್ ಅಂತಾ ಮಹಾನ್ ಸಾಹಿತಿಗಳು ಹೇಳಿದ್ದಾರೆ. ನಮ್ಮ ಭಜನೆ ಬಸವನಿಗೆ ಈ ಅನುಮಾನ ಎಲ್ಲಿಂದ ಬಂತು? ಅಂತಾ ವಿಚಾರ ಮಾಡ್ತಾ ಮಾಡ್ತಾ ಸುಮಾರು ಅರ್ಧ ಕಿ.ಮೀ. ವಾಕಿಂಗ್ ಮಾಡಿದ್ದೆ. ತಲೆಯಲ್ಲಿ ಬರೀ ಬ್ಲೈಂಡ್ ಆಂಡ್ ಬ್ರೈಟ್ ಶಬ್ದಗಳೇ ಪರಸ್ಪರ ಡಿಕ್ಕಿ ಹೊಡೆಯಲಾರಂಭಿಸಿದವು.
ಅಲ್ಲ ಬಸವ, ಈ ವಿಚಾರಕ್ಕೆ ನಿನಗೆ ಏನು ಕಾರಣ ಅಂತಾ ಕೇಳಿದೆ.
ಏನಿಲ್ಲ. ನಮ್ಮ ಪಕ್ಕದ ಮನೆ ಶೆಟ್ರು ಇದ್ದಾರಲ್ಲ ಅವರ ವಯಸ್ಸು ಈಗ ಕಮ್ಮಿತ ಕಮ್ಮಿ ಅಂದ್ರ ೭೫ ವರ್ಷ ಇರಬಹುದು. ಅವರು ತಿಳಿವಳಿಕೆ ಇದ್ದವರು. ಅವರು ಈ ವಯಸ್ಸಿನಲ್ಲಿ ೫೦ರ ಸನಿಹಯದ ವಯಸ್ಸಿನ ಮಹಿಳೆಯನ್ನು ಪ್ರೀತಿ ಮಾಡಿ ಮದುವೆ ಆಗ್ಯಾರ. ಅಂದ್ರ ಇದೇನು ಬ್ಲೈಂಡ್ ಲವ್ ಅಂತಾ ಅನಬೇಕೋ ಅಥವಾ ಬ್ರೈಟ್ ಲವ್ ಅನಬೇಕೋ ಅಂತಾ ನನಗೆ ಅನುಮಾನ ಶುರು ಆಗೇದ. ಅದಕ್ಕ ಮುಂಜಾನೆ ನಿಮಗೇನರ ಹೊಳಿಬಹುದೇನ ಅಂತಾ ಕೆಲಸ ಬಿಟ್ಟು ಓಡೋಡಿ ಬಂದು ಕೇಳಾಕ ಹತ್ತೇನಿ ಅಂದ.
ಶೆಟ್ರ ಲವ್ ಸ್ಟೋರಿ ಕೇಳಿ ನನಗ ಇನ್ನು ಕುತೂಹಲ ಉಂಟಾಯಿತು. ಟೀನ್ ಏಜ್(ಹದಿಹರೆಯದಲ್ಲಿ)ನಲ್ಲಿ ಹುಡುಗಾಟಿಕೆ ವಯಸ್ಸು ದಾರಿ ತಪ್ಪಿರಬಹುದು ಅಂತಾ ಅನ್ನುವ ಹಾಗೆ ಇಲ್ಲ. ಅವರು ಪ್ರೀತಿಸಿರುವ ಹೆಣ್ಣು ಹರೆಯದ ವಯಸ್ಸಿನವಳೂ ಅಲ್ಲ. ಅವಳು ಮದುವೆಯಾದವಳು. ಮೊದಲ ಪತಿಯಿಂದ ಮಕ್ಕಳನ್ನು ಪಡೆದವಳು. ಮಕ್ಕಳು ವಿದೇಶದಲ್ಲಿ ಉದ್ಯೋಗ ಮಾಡ್ತಾರ. ಅಂತಹದರಾಗ ಲವ್, ಮದುವೆ ಎಂತಹದು ಇದು ಅಂಬೋದ ದಿಗಿಲಾಯಿತು. ಹೋಗಲಿ ಬಿಡಿ ಅವಳು ಹುಡುಗಿ, ಆಕೆ ಏನರ ಮುದುಕನ್ನ ಪ್ರೀತಿ(‘ನಿಶಬ್ದ’ ಹಿಂದಿ ಸಿನಿಮಾ ತರಹ) ಮಾಡಿದ್ದಾಳೆ ಅನ್ನುವ ಹಾಗೇನೂ ಇಲ್ಲ...
ಅಲ್ಲೋ ಬಸವಾ ಅವರ ಲವ್ ಬೆಳೆದ್ದದಾದರೂ ಹೇಗೆ? ಎಂದು ಪ್ರಶ್ನಿಸಿದೆ.
ಹೇ ಬಿಡ್ರಿ. ನೀವು ತುಂಬಾ ತಮಾಷೆ ಮಾಡ್ತಿರೇಪಾ. ಹ್ಯಾಂಗ್ ಹೇಳೋದ್ರಿ?
ನೀನು ಹೇಳದಿದ್ರ ನಾನರ ಹ್ಯಾಂಗ್ ನಿನ್ನ ಅನುಮಾನ ಪರಿಹರಿಸಲು ಸಾಧ್ಯೆ ಹೇಳು? ಅಂದಾಗ....
ಒಂದಿನ ಏನಾತು ಅಂದ್ರೆ.....
ನಗರದಿಂದ ೧೦ ಕಿ.ಮೀ. ದೂರದಲ್ಲಿ ಶೆಟ್ರ ತೋಟ ಐತಿ. ನಿವೃತ್ತಿ ನಂತರ ಶೆಟ್ರು ತೋಟದಲ್ಲೇ ಹೆಚ್ಚಿನ ವೇಳೆ ಕಳೆಯುತ್ತಿದ್ದರು. ಹೀಗೆ ಇರುತ್ತಿದ್ದಾಗ ಅವರ ಪಕ್ಕದ ತೋಟಕ್ಕೆ ಒಬ್ಬ ಮಧ್ಯೆ ವಯಸ್ಸಿನ ಮಹಿಳೆ ಬರಲಾರಂಭಿಸಿದಳು. ಅವಳು ತೋಟದ ಮಾಲೀಕಳು. ಅವರೇ ಖುದ್ಧಾಗಿ ಬಂದು ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಆದರೆ ಶೆಟ್ರ ತೋಟದ ಕೂಲಿ ಹುಡುಗರು, ಆ ಮಹಿಳೆಯ ತೋಟದಲ್ಲಿನ ಹಣ್ಣನ್ನು ಕದ್ದು ಕಿತ್ತು ತಿನ್ನುತ್ತಿದ್ದರು. ಮಹಿಳೆ ಗಮನಕ್ಕೆ ಈ ಸಂಗತಿ ಬಂದು, ಯಾರು ಕೀಳುತ್ತಿರಬಹುದು ಎಂದು ಪತ್ತೆ ಹಚ್ಚಲು ಮರೆಯಲ್ಲಿ ಕಾದು ಕುಳಿತಳು. ಒಂದು ದಿನ ಒಬ್ಬ ಹುಡುಗ ಹಣ್ಣು ಕೀಳುವುದಕ್ಕೂ ಮಹಿಳೆ ಬಂದು ಅವನ ಹಿಡಿದು ನಾಲ್ಕು ಏಟು ಕೊಟ್ಟಳು. ಜೋರಾಗಿಯೇ ಥಳಿಸಿದಳು. ಆ ಹುಡುಗ ಬಿದ್ದ ಏಟಿಗೆ ಕೂಗಿಕೊಂಡ. ಅದನ್ನು ದೂರದಲ್ಲಿದ್ದ ಶೆಟ್ರು ಕೇಳಿಸಿಕೊಂಡು ಬಂದರು. ಹುಡುಗನನ್ನು ವಿಚಾರಿಸಿದರು. ನಡೆದ ಘಟನೆ ಹುಡುಗ ವಿವರಿಸಿದ.
ಯಾರೋ ಅದು? ನಮ್ಮ ಹುಡುಗನ್ನು ಹೊಡಿಯಾಕ ಅವಳಿಗೇನು ಧೈರ್ಯ ಬಂತು ಎಂದು ವೀರಾವೇಶದಿಂದ ತಮ್ಮ ಹುರಿ ಮೀಸೆ ಮೇಲೆ ಕೈಹಾಕಿಕೊಂಡು ಶೆಟ್ರು ಮಹಿಳೆ ಇರುವ ತೋಟಕ್ಕೆ ನುಗ್ಗಿದ್ರು.
ನಮ್ಮ ಹುಡುಗನ್ನ ಹೊಡೆಯಲು ನೀನು ಯಾರು? ಎಂದರು.
ಸ್ವಲ್ಪ ಗಲಿಬಿಲಿಗೊಂಡ ಮಹಿಳೆ, ಆ ಹುಡುಗ ನಮ್ಮ ತೋಟದಲ್ಲಿ ಹಣ್ಣು ಕೀಳುತ್ತಿದ್ದ ಅದಕ್ಕೆ ಥಳಿಸಿದೆ ಎಂದು ತಣ್ಣಗೆ ಉತ್ತರಿಸಿದಳು.
ಒಂದು ಹಣ್ಣು ಕಿತ್ತರೇನಾಯಿತು? ಅದಕ್ಕಂತ ಹೊಡೆಯುವುದೇ? ನನಗೆ ಹೇಳಿದ್ರ ಅಂತಹ ನೂರು ಹಣ್ಣುಗಳನ್ನು ನೀನಗೆ ಕೊಡುತ್ತಿದ್ದೆ.... ಹೀಗೆ ಅವಳನ್ನು ತರಾಟೆಗೆ ತೆಗೆದುಕೊಂಡ್ರು.
ಆಗ ಅವಳ ಕಣ್ಣಲ್ಲಿ ನೀರು ಕಾಣಿಸಿಕೊಂಡಿತು....
ಅಷ್ಟಕ್ಕೆ ಶೆಟ್ರು ಸುಮ್ಮನಾಗಿ ತಮ್ಮ ತೋಟಕ್ಕೆ ಮರಳಿದರು. ಆದರೆ ಆ ಮಹಿಳೆ ಕಣ್ಣಲ್ಲಿ ತುಳಿಕಿದ ಕಣ್ಣೀರು ಮಾತ್ರ ಅವರ ಮನಸ್ಸನ್ನು ಕಲಕಿತು. ಮರು ದಿನ ಆ ಮಹಿಳೆ ತೋಟಕ್ಕೆ ಬಂದಿದ್ದಾಳೋ ಇಲ್ಲವೋ? ಎಂದು ಕದ್ದು ಕದ್ದು ನೋಡಲಾರಂಭಿಸಿದರು. ಹೀಗ ಕೆಲವು ದಿನಗಳು ಉರಳಿದ ನಂತರ ಒಂದು ದಿನ ಶೆಟ್ಟರು ಅ ಮಹಿಳೆಯನ್ನು ತಾವೇ ಮಾತನಾಡಿಸಿದರು. ಅವಳ ಕುಟುಂಬದ ಕುರಿತು ವಿಚಾರಿಸಿದರು. ಅವಳ ಪತಿ ತೀರಿಕೊಂಡಿದ್ದಾನೆ. ಮಗ ದೂರದ ಊರಲ್ಲಿ ನೌಕರಿ ಮಾಡುತ್ತಿದ್ದಾನೆ. ತಾನೊಬ್ಬಳೇ ಒಂಟಿ ಜೀವನ ಸಾಗಿಸುತ್ತಿರುವುದಾಗಿ ವಿವರಿಸಿದಳು.
ಶೆಟ್ರಿಗೆ ಅಯ್ಯೋ ಅನಿಸಿತು. ಒಂಟಿ ಜೀವದ ಮನಸ್ಸಿಗೆ ಘಾಸಿಯಾಗುವು ಹಾಗೆ ಮಾತನಾಡಿದ ಅನಿಸಿತು.
ಒಂದು ದಿನ ಮಹಿಳೆ ಬಳಿ ಹೋಗಿ, ಕ್ಷಮಿಸಬೇಕು ಮೇಡಂ. ಮೊನ್ನೆ ಸ್ವಲ್ಪು ಒರಟಾಗಿ ಮಾತನಾಡಿದೆ ಎಂದು ಶೆಟ್ರು ಹೇಳಿದರು.
ಪರವಾಗಿಲ್ಲ ಬಿಡ್ರಿ, ತಾವು ಹಿರಿಯರು ಎಂದಳು.
ಪತ್ನಿ ತೀರದ ಮೇಲೆ ಒಬ್ಬಂಟಿಯಾಗಿದ್ದ ಶೆಟ್ರು, ಒಬ್ಬಂಟಿ ಜೀವದ ಕಷ್ಟಗಳನ್ನು ಅನುಭವಿಸಿದವರು. ಹೀಗಾಗಿ ಆ ಮಹಿಳೆ ಮೇಲೆ ತೀವ್ರ ಅನುಕಂಪ ಉಂಟಾಯಿತು. ಹೀಗೆ ಶೆಟ್ರ ಅನುಕಂಪವು ಅವಳ ಕಾಳಜಿಯಾಗಿ ಪರಿವರ್ತನೆಯಾಯಿತು. ಇಬ್ಬರು ಪರಸ್ಪರ ತೀರಾ ಹತ್ತಿರವಾದರು. ಕೊನೆಗೆ ತಾವು ಯಾಕೆ ವಿವಾಹವಾಗಿ ಪರಸ್ಪರ ಒಂಟಿ ಜೀವನಕ್ಕೆ ಗುಡ್ಬೈ ಹೇಳಬಾರದು ಎಂದು ಚರ್ಚಿಸಿದರು. ವಿಚಾರ ಇಬ್ಬರಿಗೂ ಸರಿ ಅನಿಸಿತು. ವಿವಾಹ ಮಾಡಿಕೊಂಡರು.
ಆದರೆ ಶೆಟ್ರ ಮೊದಲ ಹೆಂಡತಿಯ ಮಕ್ಕಳು ವಿರೋಧ ಮಾಡಿದರು. ಅವರ ವಾರಸುದಾರಿಕೆಗೆ ತೊಂದರೆ ಆಗದಂತೆ ನಡೆದುಕೊಳ್ಳುವ ಲಿಖಿತ ಮಾತುಕೊಟ್ಟ ನಂತರ ಶೆಟ್ರ ದಾರಿ ಕ್ಲೀಯರ್ ಆಯಿತು. ಸುಖವಾಗಿದ್ದಾರೆ. ಇಸ್ಟ ಅದ ನೋಡ್ರಿ ಎಂದು ಬಸುವಾ ಹೇಳಿದ.
ಇನ್ನೊಂದು ಇಂಟರೆಸ್ಟಿಂಗ್ ಸಂಗತಿ ಅಂದ್ರ, ಶೆಟ್ರ ಈಗ ಹೊಸ ಹೊಸ ಟೀ ಶರ್ಟ್, ಜೀನ್ಸ್ ಪ್ಯಾಂಟ್ ತೊಟ್ಟು ಮೇಡಂ ಜೊತೆ ಜಾಲಿಯಾಗಿದ್ದಾರೆ. ಇದಕ್ಕೆ ನೀವೇನಂತಿರಿ? ಎಂದು ಪ್ರಶ್ನೆ ಕೇಳಿದ.
ಸ್ವಲ್ಪ ಟೈಂ ಕೋಡೋ ಬಸವಾ, ನಾಳೆ ಮುಂಜಾನೆ ವಾಕಿಂಗ್ಗೆ ಬಂದಾಗ ಹೇಳ್ತೇನಿ ಎಂದು ಮನೆಗೆ ಹೋದೆ.
ಮರುದಿನ ಮುಂಜಾನೆ ವಾಕಿಂಗ್ಗೆ ಹೋದಾಗ ಭಜನೆ ಸಪ್ಪಳ ಕೇಳಿತು. ಹೊಳ್ಳಿ ನೋಡಿದರೆ ಭಜನೆ ಬಸವ.
ಏನಾಯಿತು? ಬ್ಲೈಂಡೋ, ಬ್ರೈಟೋ? ಎಂದು ಕೇಳಿದ.
ಬಸವಾ ಇದು ಲವ್ ಐತಲ್ಲ ಬ್ಲೈಂಡೇ. ಆದರೆ ಇದು ಬರೀ ಬ್ಲೈಂಡ್ ಅಲ್ಲ. ಬ್ರೈಟ್ ಕೂಡಾ.
ಬ್ಲೈಂಡ್ ಆಗಿರೋದರಿಂದ ಅದಕ್ಕೆ ಅದು ಯಾರ್ಯಾರಿಗೂ ಡಿಕ್ಕಿ ಹೊಡಿತಾ ಇರ್ತೈತಿ. ಯೋಗಿಗಳನ್ನ ಸಹ ಬಿಟ್ಟಿಲ್ಲ. ಮತ್ತೆ ಬ್ರೈಟ್ ಕೂಡಾ. ಯಾಕಂದರ ಲವ್ ಕೆಲವೊಮ್ಮೆ ಎಲ್ಲರೂ ಮೆಚ್ಚಿಕೊಳ್ಳುವಂತೆ ಇರುತ್ತದೆ.
ಮತ್ತೆ ನಮ್ಮ ಶೆಟ್ಟರ ಲವ್ ಎಂತಹದು ಅಂತೀರಿ?
ಶೆಟ್ರ ಲವ್ ಐತಲ್ಲ. ಇದು ಒಂದು ರೀತಿ ಗಣಿತದಲ್ಲಿ ಹೇಳ್ತಾರಲ್ಲಿ ಮೈನಸ್ ಇನ್ ಟೂ ಮೈನಸ್ ಇಸಿಕ್ವಲ್ಟು ಪ್ಲಸ್ ಅಂತಾರಲ್ಲ ಹಾಗೆ ಅನಿಸುತ್ತೆ ನೋಡಪಾ ನನಗೆ ಅಂದೆ.
ಮೈನಸ್ ಇನ್ ಟು ಮೈನಸ್ ಪ್ಲಸ್... ಮೈನಸ್ ಇನ್ ಟೂ ಮೈನಸ್ ಪ್ಲಸ್. ಇದು ಖರೇ ಇರಬಹುದು. ಸರ್ ನಿಮ್ಮ ಆರ್ಗಿವ್ಮೆಂಟ್ ಪೆಂಡಿಂಗ್ ಇಟ್ಟೇನಿ. ಪರಿಶೀಲಿಸಿ ತೀರ್ಪು ನೀಡ್ತೇನಿ ಅಂತಾ ಹೇಳಿ. ಬ್ಲೈಂಡ್... ಬ್ರೈಟ್... ಪ್ಲಸ್... ಅನುಕೊಂತ ಬಸವಾ ಓಡಿದ.

ಗೋವಿಂದ ಮಡಿವಾಳರ

ಫೆಬ್ರವರಿ ತಿಂಗಳ ‘ಕನ್ನಡಪ್ರಭ’ದ ಸಾಪ್ತಾಹಿಕಪ್ರಭದಲ್ಲಿ ಪ್ರಕಟವಾಗಿದೆ.