Saturday, January 12, 2008

ಅವನಿಗೆ ಸಂಗಾತಿ, ಉಳಿದವರಿಗೆ ಸಾಕ್ಷಿ


ಗೋವಿಂದ ಮಡಿವಾಳರ

ಒಬ್ಬ ಮಹಿಳೆ ತನ್ನ ಪತಿಯ ಆಸ್ತಿ ತನಗೆ ಸಿಕ್ಕೀತೆ ಎಂಬ ನಿರೀಕ್ಷೆಯಲ್ಲಿ ನ್ಯಾಯಾಲಯದ ಬೆಂಚೊಂದರ ಮೇಲೆ ಕುಳಿತಿದ್ದಾಳೆ. ಇನ್ನೊಂದೆಡೆ ಅವಳ ಆಸ್ತಿ ಹಕ್ಕಿನ ಹೋರಾಟಕ್ಕೆ ಕೋರ್ಟ್ ಅಂತಿಮ ತೆರೆ ಎಳೆದು ನಮ್ಮ ಪರ ಜಯ ಸಿಕ್ಕೀತು ಎಂದು ಕೆಲವರು ಕುಳಿತ್ತಿದ್ದಾರೆ.
ಆಗ ನ್ಯಾಯಾಧೀಶರು.... ಈ ಲಗ್ನಪತ್ರ ನಿಮ್ಮ ಬಳಿ ಹೇಗೆ ಬಂತು?. ಅದೂ ನಿಮ್ಮ ಅಥವಾ ನಿಮ್ಮ ಸಂಬಂಧಿಗಳ ಮದುವೆಯ ಲಗ್ನಪತ್ರವೂ ಅಲ್ಲ. ಮದುವೆಯಾಗಿ ಇಷ್ಟು ವರ್ಷಗಳ ತನಕ ನಿಮ್ಮ ಬಳಿ ಹೇಗೆ ಉಳಿಯಿತು? ಎಂದು ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು ಬಂದಿದ್ದ ರಾಮನಾಥ ಬನಶಂಕರಿ ಅವರಿಗೆ ನ್ಯಾಯಾಧೀಶರೇ ಸ್ವತಹ ಪ್ರಶ್ನಿಸಿದರು.
ಸರ್ ನನಗೆ ಯಾರೇ ತಮ್ಮ ಮದುವೆ ಕರೆಯೋಲೆ ಕಳಿಸಲಿ ಅಥವಾ ಹುಟ್ಟುಹಬ್ಬದ ಆಮಂತ್ರಣ ಪತ್ರಿಕೆ ಕಳಿಸಿದರೂ ಅವುಗಳನ್ನು ಸಂಗ್ರಹಿಸಿ ಇಡುವ ಹವ್ಯಾಸ ಇದೆ. ನನ್ನ ಬಳಿ ಸಾವಿರಾರು ಲಗ್ನ ಪತ್ರಿಕೆ, ಸ್ನೇಹಿತರು ಬರೆದ ಪತ್ರ, ಹುಟ್ಟುಹಬ್ಬದ, ಗೃಹಪ್ರವೇಶದ ಆಮಂತ್ರಣ ಪತ್ರ ಹೀಗೆ ಹಲವಾರು ಪತ್ರಗಳು ನಮ್ಮ ಮನೆಯಲ್ಲಿ ಸಂಗ್ರಹಿಸಿ ಇಟ್ಟಿದ್ದೇನೆ ಎಂದರು.
ಹಾಗಾದರೆ ಈ ಲಗ್ನ ಪತ್ರದ ಹಿಂದಿನ ದಿನಾಂಕಿನ ಒಂದು ನೂರು, ಮತ್ತು ಅದರ ಪೂರ್ವದಲ್ಲಿನ ಒಂದು ನೂರು ಪತ್ರಗಳನ್ನ ಅಥವಾ ಲಗ್ನ ಪತ್ರಿಕೆಗಳನ್ನು ಕೋರ್ಟಿಗೆ ಹಾಜರ ಮಾಡಲಿಕ್ಕೆ ಸಾಧ್ಯೆನಾ ನಿಮಗೆ? ಎಂದು ನ್ಯಾಯಾಧೀಶರು ಕೇಳಿದರು.
ಖಂಡಿತ ಮಾಡ್ತೇನ್ರಿ ಸರ್ ಎಂದು ರಾಮನಾಥ ಹೇಳಿದರು.
ನಿಗದಿತ ದಿನದಂದು, ನಿಖರವಾಗಿ ನ್ಯಾಯಾಧೀಶರ ಕೇಳಿದಷ್ಟನ್ನು ಸ್ನೇಹಿತರು ಬರೆದ ಪತ್ರಗಳನ್ನು, ಕಳಿಸಿದ ಲಗ್ನ ಪತ್ರಿಕೆಗಳನ್ನು ತಂದು ಕೋರ್ಟ್ ಮುಂದೆ ಹಾಜರಪಡಿಸಿದ. ಅದನ್ನು ಪರಿಶೀಲಿಸಿದ ನ್ಯಾಯಾಧೀಶರು, ಎಲ್ಲ ಪತ್ರಗಳು ಸರಿಯಾಗಿವೆ. ಈಗ ನೀವು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಹಾಜರ ಪಡಿಸಿರುವ ಲಗ್ನ ಪತ್ರವನ್ನು ಸಾಕ್ಷಿ ಎಂದು ಕೋರ್ಟ್ ಪರಿಗಣಿಸುತ್ತಿದೆ ಎಂದರು.
ಮುಂದೆ ಮಹಿಳೆ ಪರ ಕೋರ್ಟ್ ತೀರ್ಪು ನೀಡಿತು. ಅದರಲ್ಲಿ ಆ ಮಹಿಳೆ ಪತಿಯ ಆಸ್ತಿ ಪಡೆಯಲು ಅರ್ಹತೆ ಹೊಂದಿದ್ದಾಳೆ. ಅವಳ ಪಾಲಿನ ಆಸ್ತಿಯನ್ನು ಪತಿಯ ಮನೆಯವರು ಕೊಡಬೇಕು ಎಂದು ಹೇಳಲಾಗಿತ್ತು.
ಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆ ಚಿಂತಾಕ್ರಾಂತಳಾಗಿ ಕುಳಿತಿದ್ದ ಮಹಿಳೆಯ ಮೊಗದಲ್ಲಿ ಜೀವಕಳೆ ಇಣಿಕಿ ಕಣ್ಣು ಮಿಟಿಕಿತು.
ಇದು ಕತೆ ಅಲ್ಲ. ಈಗ್ಗೆ ಕೆಲವು ವರ್ಷಗಳ ಹಿಂದೆ ಉತ್ತರ ಕರ್ನಾಟಕದ ಪ್ರಮುಖ ನಗರದ ಒಂದು ಕೋರ್ಟ್‌ನಲ್ಲಿ ನಡೆದ ಘಟನೆ. ಹವ್ಯಾಸವೂ ಹರ್ಷ ತಂದೀತು ಎಂಬುದಕ್ಕೆ ಇದು ಒಂದು ಸಾಕ್ಷಿ.
ಆ ಮಹಿಳೆ ಉನ್ನತ ಶಿಕ್ಷಣ ಪಡೆದವಳು. ಸ್ವಂತ ಉದ್ಯೋಗ ಮಾಡುತ್ತಿದ್ದ ವ್ಯಕ್ತಿಯನ್ನು ವಿವಾಹ ಆಗಿದ್ದಳು. ಮದುವೆಯಾದ ಎರಡೇ ವರ್ಷದಲ್ಲಿ ಪತಿಯನ್ನು ಅಪಘಾತದಲ್ಲಿ ಕಳೆದುಕೊಂಡಿದ್ದಳು. ಎರಡು ವರ್ಷ ಜೀವನ ನಡೆಸಿದ ನಂತರವೂ ಅವಳ ಬಳಿ ಪತಿಯ ಜೊತೆ ಇದ್ದ ಒಂದೇ ಒಂದು ಫೋಟೋ ಇಟ್ಟುಕೊಂಡಿರಲಿಲ್ಲ. ಲಗ್ನಪತ್ರ ಇದ್ದರೂ ಅದು ಪತಿಯ ಮನೆಯವರ ಬಳಿ ಇತ್ತು. ಅವರಿಬ್ಬರ ಸಾಕ್ಷಿಯಾಗಿ ಒಂದು ಮಗು ಕೂಡಾ ಇರಲಿಲ್ಲ. ಹೀಗೆ ಅವಳು ಬರಿಗೈಲೆ ಇದ್ದಳು. ಆಸ್ತಿ ಕೇಳುವ ಅನಿವಾರ್ಯತೆ ಅವಳಿಗೆ ಬಂದಾಗ ಅವಳ ನೆರವಿಗೆ ಬಂದದ್ದು ಕೇವಲ ಒಂದು ಲಗ್ನ ಪತ್ರ. ಅದು ಅವಳ ಹಕ್ಕಿನ ಸಾಕ್ಷಿಯಾಗಿ ನಿಂತಿತು. ಪತಿಯ ಮನೆಯಿಂದ ಅವಳಿಗೆ ಸಿಗಬೇಕಾದ ನ್ಯಾಯಯುತ ಆಸ್ತಿ ಪಾಲು ಸಿಕ್ಕಿತು. ಅದು ಅವಳ ಜೀವನಕ್ಕೆ ಆಸರೆಯಾಯಿತು.
ಟಿ ನಡೆದದ್ದು ಇಷ್ಟೇ:ತೀರಾ ಚಿಕ್ಕ ವಯಸ್ಸಿನಲ್ಲೇ ಪತಿ ಕಳೆದುಕೊಂಡ ಅವಳಿಗೆ ಆ ಕ್ಷಣಕ್ಕೆ ಅತ್ತೆ-ಮಾವರ ಮನೆಗಿಂತ ಅಪ್ಪ-ಅಮ್ಮನ ಮನೆ ಸುರಕ್ಷೆ ಅನಿಸಿತು. ಅಲ್ಲೇ ವಾಸವಾಗಿದ್ದಳು. ಮುಂದೆ ಕೆಲ ವರ್ಷಗಳ ನಂತರ ತಂದೆ-ತಾಯಿಗೆ ವಯಸ್ಸಾದ ನಂತರ, ಅಣ್ಣಂದಿರ ಹೆಂಡಂದಿರ ಕಿರಿಕಿರಿ ಆರಂಭವಾಯಿತು. ಆಗ ಅವಳಿಗೆ ತವರು ಬೇಸರವಾಯಿತು. ಪತಿ ಮನೆ ಒಂದೇ ಗತಿ. ಆದರೆ ಪತಿ ತೀರಿಕೊಂಡ ನಂತರ ಒಂದೇ ಒಂದು ಬಾರಿ ಅವಳು ಪತಿಯ ಮನೆಗೆ ಹೋಗಿಬಂದವಳಲ್ಲ. ಅವರ ಸಂಪರ್ಕವೇ ಕಡಿದುಹೋಗಿತ್ತು. ಆದರೆ ಇಷ್ಟು ವರ್ಷಗಳ ನಂತರ ಈಗ ಅಲ್ಲಿ ಹೋದರೆ ನನ್ನನ್ನು ಅವರು ಹೇಗೆ ಸ್ವೀಕರಿಸಿಯಾರು? ಎಂಬ ಮಾನಸಿಕ ಹೋಯ್ದಾಟದಲ್ಲಿ ಒಂದು ನಿರ್ಣಯಕ್ಕೆ ಬಂದಳು. ತನ್ನ ಪತಿಗೆ ಬರಬೇಕಾದ ಆಸ್ತಿ ಪಡೆದು ಪ್ರತ್ಯೇಕವಾಗಿ ಜೀವನ ನಡೆಸುವುದೇ ಸೂಕ್ತ ಎಂದು. ಅಸ್ತಿ ಕೇಳಿ ಕೋರ್ಟ್‌ನಲ್ಲಿ ದಾವೆ ಹೂಡಿದಳು. ಆಗ ಅವಳು ಪತಿಯ ಆಸ್ತಿಗೆ ಹಕ್ಕುದಾರಳು ಎಂದು ಒಂದೇ ಒಂದು ಸಾಕ್ಷಿ ಇಲ್ಲದೇ ಪೇಚಾಡುತ್ತಿದ್ದಳು. ಮದುವೆಯಾಗಿ ಎರಡು ವರ್ಷ ಜೀವನ ನಡೆಸಿದರೂ ಮಗು ಕೂಡಾ ಆಗಿರಲಿಲ್ಲ. ಮಗು ಇದ್ದಿದ್ದರೆ ಈ ಸಮಸ್ಯೆ ಇರುತ್ತಿರಲಿಲ್ಲ. ಹೀಗೆ ಯಾವುದೇ ಸಾಕ್ಷಿ ಇಲ್ಲದ ಪರಿಸ್ಥಿತಿಯಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ಇನ್ನೇನು ಇತ್ಯರ್ಥ ಆಗುತ್ತದೆ. ಆಸ್ತಿ ಸಿಗುವುದಿಲ್ಲ. ಪತಿ ಸತ್ತಾಗಲೇ ಎಂತಹದೇ ಕಷ್ಟಗಳು ಎದುರಾಗಿದ್ದರೂ ಅಲ್ಲೇ ಇದ್ದಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಚಿಂತಾಕ್ರಾಂತಳಾಗಿದ್ದಾಗ ಅವಳಿಗೆ ಆಕಸ್ಮಿಕವಾಗಿ ಅವಳ ತಂದೆಗೆ ಪರಿಚಿತರಾದ ರಾಮನಾಥ ಬನಶಂಕರಿ ಅವರು ಹೀಗೆ ಯಾವುದೋ ಒಂದು ಪ್ರಸಂಗದಲ್ಲಿ ಹಳ್ಳಿಯೊಂದರಲ್ಲಿ ಭೇಟಿಯಾದರು. ಆಗ ಔಪಚಾರಿಕವಾಗಿ ಮಾತನಾಡುತ್ತ, ತನ್ನ ಕಷ್ಟ ಹೇಳಿಕೊಂಡಳು. ಆಗ ಅವರು ತನ್ನ ಬಳಿ ಅವಳ ಲಗ್ನದ ವೇಳೆಯಲ್ಲಿ ಅವಳ ತಂದೆಯವರು ಕಳಿಸಿದ್ದ ಲಗ್ನಪತ್ರಿಕೆ ಇದೆ ಎಂದು ಹೇಳಿದರು. ಆ ಸುದ್ದಿ ಕೇಳಿ ಅವಳಿಗೆ ಹೋದ ಜೀವ ಬಂದಂತಾಯಿತು. ಅವಳು ತೀರ ದಯನೀಯವಾಗಿ ಕೇಳಿಕೊಂಡಳು. ಆ ಲಗ್ನಪತ್ರ ತಂದು ಕೊಡಿ, ಕೋರ್ಟ್‌ಲ್ಲಿ ಹಾಜರ ಪಡಿಸಿ ನನ್ನ ಪಾಲಿಗೆ ಬರಬೇಕಾದ ಆಸ್ತಿಯನ್ನು ಪಡೆದು ಸ್ವತಂತ್ರ ಜೀವನ ನಡೆಸುತ್ತೇನೆ ಎಂದಳು. ರಾಮನಾಥ ಅವರು ಒಪ್ಪಿ, ಅವಳಿಗೆ ಲಗ್ನ ಪತ್ರದ ಪ್ರತಿಯನ್ನು ತಂದು ಕೊಟ್ಟರು. ಕೋರ್ಟ್‌ನಲ್ಲಿ ಹಾಜರಪಡಿಸಿದ್ದರು.
ಹೀಗೆ ಒಂದು ಲಗ್ನ ಪತ್ರಿಕೆ ಒಬ್ಬ ಮಹಿಳೆಗೆ ಕೋರ್ಟ್‌ನಲ್ಲಿ ನ್ಯಾಯ ಕೊಡಿಸಲು ಸಾಕ್ಷಿಯಾಯಿತು.
ಈ ಲಗ್ನ ಪತ್ರವನ್ನು ಸಂಗ್ರಹಿಸಿ ಇಟ್ಟ ರಾಮನಾಥ ಅವರು ಮುಂದೊಂದು ದಿನ ಅದು ಇಂತಹ ಮಹತ್ವದ ಸಹಾಯಕ್ಕೆ ಸಾಕ್ಷಿಯಾಗಬಹುದು ಎಂದು ಸಂಗ್ರಹಿಸಿ ಇಟ್ಟವರಲ್ಲ. ಕೇವಲ ಪತ್ರಗಳನ್ನು ಸಂಗ್ರಹಿಸುವ ಹವ್ಯಾಸ ಅಷ್ಟೇ. ಇವರ ಬಳಿ ಸಾವಿರಾರು ಇಂತಹ ಪತ್ರಗಳು ಇವೆ. ಅವುಗಳಲ್ಲಿ ಸ್ನೇಹಿತರು, ಸಂಬಂಧಿಕರು ಬರೆದ ಪತ್ರಗಳು, ಲಗ್ನ ಪತ್ರಗಳು, ಮಕ್ಕಳು ಹುಟ್ಟಿದ ಸಂತೋಷದ ಸಮಾಚಾರ ತಿಳಿಸಿದ ಪತ್ರಗಳು, ನಿಧನ ವಾರ್ತೆ ಹೊತ್ತು ತಂದ ಪತ್ರಗಳು. ಗೃಹ ಪ್ರವೇಶ ಆಮಂತ್ರಣ ಪತ್ರಗಳು ಹೀಗೆ ಹಲವಾರು ವಿಧದ ಪತ್ರಗಳನ್ನು ಸಂಗ್ರಹಿಸಿ ಇಟ್ಟಿದ್ದಾರೆ. ಅವರು ಬರೀ ಪತ್ರಗಳನ್ನು ಅಷ್ಟೇ ಸಂಗ್ರಹಿಸಿಲ್ಲ. ಅಂಚೆ ಚೀಟಿ, ಕಲಾತ್ಮಕವಾದ ಕ್ಯಾಲೆಂಡರ್‌ಗಳನ್ನು, ಅಪರೂಪದ ಭಾವಚಿತ್ರಗಳನ್ನು ಸಂಗ್ರಹಿಸಿ ಇಟ್ಟಿದ್ದಾರೆ. ವೃತ್ತಿಯಿಂದ ಅವರು ಒಬ್ಬ ಸರಕಾರಿ ನೌಕರರು.

No comments: