- ಗೋವಿಂದ ಮಡಿವಾಳರ
ಸಣ್ಣಪುಟ್ಟ ವಿಷಯಗಳಿಗಾಗಿ ಬೀದಿರಂಪ ಮಾಡಿಕೊಂಡು ತಿರುಗಾಡುವ ನಮ್ಮ ರಾಜಕಾರಣಿಗಳನ್ನು ಕಂಡಾಗಲೆಲ್ಲ ನಮ್ಮೂರ ‘ಭಜನೆ ಬಸವ’ ಧುತ್ತನೆ ಎದುರಿಗೆ ಬಂದು ನಿಂತು, ಭಜನೆ ಮಾಡಿ ಹಲ್ಲುಗಿಂಜಿದ್ಹಾಂಗ ಅನ್ಸತದ.
ಚಿಕ್ಕದಾದ ಹಳ್ಳಿ, ಊರ ಮುಂದೆ ಸದಾ ಹರಿಯುವ ನದಿ, ಗ್ರಾಮದ ಅಕ್ಕಪಕ್ಕದಲ್ಲಿ ಪೇರಲ ಹಣ್ಣಿನ ತೋಟಗಳು, ಹೀಗೆ ಸದಾ ಅಹ್ಲಾದಕರ ವಾತಾವರಣದ ಊರಲ್ಲಿ ಒಬ್ಬ ಹುಡುಗ ಇದ್ದ. ಆತನ ವಯಸ್ಸು ಸುಮಾರು ೧೨-೧೩ ವರ್ಷ. ಆತನ ಹೆಸರು ಭಜನೆ ಬಸವ ಅಂತ. ಅವನ ಹೆಸರು ಖರೇ ಖರೇ ಅಂದ್ರ ಭಜನೆ ಬಸವ ಅಲ್ಲವೇ ಅಲ್ಲ. ಅವನ ಹೆಸರು ಬರೀ ‘ಬಸವ’. ಆದರೆ ಅವರ ಚಿಕ್ಕಪ್ಪನ ಮಗನಿಗೂ ಬಸವ ಎಂದು ಹೆಸರು ಇಟ್ಟಕೂಡಲೇ ಇವನಿಗೆ ಅಟೋಮೆಟಿಕ್ಕಾಗಿ ಪ್ರಮೋಶನ್ ಸಿಕ್ಕು ‘ದೊಡ್ಡಬಸವ’, ಆಗಿಬಿಟ್ಟ. ಹೀಗೆ ಮುಂದೆ ತನ್ನ ಕರ್ತೃತ್ವ ಶಕ್ತಿಯಿಂದ ‘ಭಜನೆ ಬಸವ’ ಪದವಿನೂ ಪಡೆದ.
ಈ ಬಸವ ಸದಾ ತನ್ನ ಚಿಕ್ಕ ತಂಗಿಯರನ್ನು ಕರೆದುಕೊಂಡು ಗ್ರಾಮದಲ್ಲಿ ಅಲ್ಲಿ ತಿರುಗಾಡುತ್ತಿದ್ದ. ಗ್ರಾಮ ಚಿಕ್ಕದು. ಯಾರದೇ ಮನೆಯಲ್ಲಿ ತಾಯಿಂದಿರು ಮಕ್ಕಳಿಗೆ ಸ್ವಲ್ಪು ಧ್ವನಿ ಏರಿಸಿ ಕೂಗಾಡಿದರೆ ಸಾಕು, ಕೇಳಿಸುತ್ತಿತ್ತು. ಹೀಗಾಗಿ ಗ್ರಾಮದಲ್ಲಿ ಎಲ್ಲೇ ತಾಯಿಂದಿರು ಮಕ್ಕಳಿಗೆ ರೇಗಾಡೋದು, ಅಥವಾ ಯಾರಾದರು ಹುಡುಗರು ಪರಸ್ಪರ ಜಗಳಮಾಡುತ್ತಿದ್ದರೆ ಇಂವಾ ಭಜನೆ ಮಾಡುತ್ತ, ತಾಳಕ್ಕೆ ತಕ್ಕಂತೆ ಗೋಣು ಅಲ್ಲಾಡಿಸುತ್ತ ಓಡೋಡಿ ನೇರವಾಗಿ ಧ್ವನಿ ಬಂದ ಸ್ಥಳಕ್ಕೆ ಹೋಗುತ್ತಿದ್ದ. ಅಲ್ಲಿ ನಡೆದ ಜಗಳ ನೋಡಲು ಭಜನೆ ಮಾಡಿ ಜನರನ್ನ ಸೇರಿಸುತ್ತಿದ್ದ. ಇವನ ಭಜನೆ ಸಪ್ಪಳ ಕೇಳಿದರೆ ಅಡುಗೆ ಮನೆಯಲ್ಲಿನ ಹೆಣ್ಣುಮಕ್ಕಳು ಅಂಗಳಕ್ಕೆ ಬಂದು ನಿಲ್ಲುತ್ತಿದ್ದರು. ಯಾರೋ ಜಗಳ ಮಾಡ್ತಾ ಇದ್ದಾರ ಅಂತಾ ಅವರಿಗೆ ಗ್ಯಾರಂಟಿ.
ಮಹಿಳೆಯರ ಪರಸ್ಪರ ಜಗಳ ಮಾಡುತ್ತಿದ್ದರು ಅಂದರೆ, ಆತನಿಗೆ ಎಲ್ಲಿಲ್ಲದ ಉತ್ಸಾಹ. ಇತ ಅಲ್ಲಿಗೆ ಭಜನೆ ಮಾಡುತ್ತ ಹೋಗಿದ್ದಲ್ಲದೇ ಅಲ್ಲಿಂದ ಮರಳಿ ಓಡೋಡಿ ತನ್ನ ಮನೆಗೆ ಹೋಗುತ್ತಿದ್ದ. ಹೋಗುವ ಮಾರ್ಗ ಮಧ್ಯೆ ಮತ್ತೆ ಭಜನೆ ಮಾಡುತ್ತ ಇಂತಹವರ ಮನೆಯಲ್ಲಿ ಜಗಳ ನಡದೈತಿ ಅಂತಾ ಸಾರಿಕೊಂಡು ಹೋಗುತ್ತಿದ್ದ. ತನ್ನ ಚಿಕ್ಕ ತಂಗಿಯರನ್ನು ಬಗಲಲ್ಲಿ ಒಂದು, ಕೈಯಲ್ಲಿ ಇನ್ನೊಂದು ಹಿಡಿದುಕೊಂಡು ಮತ್ತೇ ಅದೇ ಸ್ಥಳಕ್ಕೆ ಬರುತ್ತಿದ್ದ. ಜಗಳ ಮುಗಿಯುವ ತನಕ ಅಲ್ಲೇ ಇದ್ದು ಆಗಾಗ ಭಜನೆ ಭಾರಿಸುತ್ತ ನಿಲ್ಲುತ್ತಿದ್ದ. ನೋಡುಗರಿಗೆ ಒಂದು ತರಹ ಮೋಜು ಅನಿಸುತ್ತಿತ್ತು. ಇಂತಹ ಕಾರ್ಯದಲ್ಲಿ ಫೇಮಸ್ ಆಗಿದ್ದಕ್ಕೆ ಮುಂದೆ ಇವನಿಗೆ ಗ್ರಾಮದಲ್ಲಿ ‘ದೊಡ್ಡ ಬಸವ’ ಎಂಬ ಹೆಸರಿನ ಬದಲು ‘ಭಜನೆ ಬಸವ’ ಎಂದು ತನ್ನಷ್ಟಕ್ಕೇ ತಾನ ಬದಲಾಗಿಬಿಟ್ಟುತ್ತು.
ಈ ಬಸವ ಶಾಲೆಗೆ ಹೋಗದೇ ಇರಲಿಕ್ಕೂ, ಭಾರತ ದೇಶದ ಬಡತನಕ್ಕೂ ಒಂದೇ ಕಾರಣ. ಅದು ಜನಸಂಖ್ಯೆ ಹೆಚ್ಚಳ. ಆಗಿದ್ದು ಇಷ್ಟೇ. ಗ್ರಾಮದಲ್ಲಿ ಶಾಲೆ ಇತ್ತು. ಆತನಿಗೆ ಶಿಕ್ಷಣ ಕೊಡಿಸುವಷ್ಟು ಪಾಲಕರು ಆರ್ಥಿಕವಾಗಿ ಚೆನ್ನಾಗಿ ಇದ್ದರು. ಆದರೂ ಭಜನೆ ಬಸವ ಯಾಕೆ ಶಾಲೆಗೆ ಹೋಗಲಿಲ್ಲ? ಆ ಚಿಕ್ಕ ವಯಸ್ಸಿನಲ್ಲಿ ಮನೆಯಲ್ಲೇ ಇರ್‍ತಿದ್ದ ಅಂದರೆ, ಆತ ೧ನೇ ಇಯತ್ತ ಮುಗಿಸಿ ೨ನೇ ಇಯತ್ತಿಗೆ ಬಡ್ತಿ ಪಡೆಯುವಷ್ಟರಲ್ಲೇ ಅವನ ತಾಯಿ ಮೂವರು ಗಂಡು ಮಕ್ಕಳು ಇದ್ದಾಗಲೂ ಮತ್ತೆ ಒಂದರ ಹಿಂದೆ ಒಂದರಂತೆ ಮೂವರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಮನೆಯಲ್ಲಿ ಒಕ್ಕಲುತನ. ಅಕ್ಕಂದಿರು ಬೇರೆ ಇಲ್ಲ. ಹೀಗಾಗಿ ಮನೆಯಲ್ಲಿನ ಅಡುಗೆ, ಮುಸುರಿ ಕೆಲಸ ಎಲ್ಲವೂ ತಾಯಿಯ ಹೆಗಲಿಗೆ. ಚಿಕ್ಕ ಚಿಕ್ಕ ಮೂವರು ಹೆಣ್ಣು ಹುಡುಗಿಯರನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇರಲಿಲ್ಲ. ಚಿಕ್ಕವರನ್ನು ನೋಡಿಕೊಳ್ಳುವ ಜವಾಬ್ದಾರಿ ಈ ದೊಡ್ಡಬಸವನ ಹೆಗಲಿಗೆ ಏರಿತ್ತು. ಹೀಗಾಗಿ ಅವನ ಹೆಗಲ ಮೇಲಿನ ಸ್ಕೂಲ್ ಬ್ಯಾಗಿನ ಸ್ಥಳಕ್ಕೆ ತಂಗಿಯರು ಏರಿ ಕುಳಿತರು. ಶಾಲೆಗೆ ಚೆಕ್ಕರ್, ತಂಗಿಯರ ಪಾಲನೆಗೆ ಹಾಜರ್ ಅನ್ನುವಂತಾಯಿತು ಆತನ ಸ್ಥಿತಿ. ಹೀಗೆ ಅವನಿಗೆ ಶಿಕ್ಷಣದ ಬಡತನ. ದೇಶಕ್ಕೆ ಆರ್ಥಿಕ ಬಡತನ.
ಮುಂದೆ ತಂಗಿಯರು ದೊಡ್ಡವರಾಗುವ ಹೊತ್ತಿಗೆ ದೊಡ್ಡಬಸವನ ಮೊಗದಲ್ಲಿ ಚಿಗುರು ಮೀಸೆ। ಅಲ್ಲಿಗೆ ಶಾಲೆ ದೂರಾಯಿತು। ಅವರದೇ ಪೇರಲ ಹಣ್ಣಿನ ತೋಟ ಕೈಹಿಡಿದು ಆವನನ್ನು ಕರೆಯಿತು. ಅಲ್ಲಿ ಕೆಲಸಗಾರರ ಜೊತೆ ಸೇರಿ ಬೀಡಿ ಸೇದುವುದು, ಎಲೆ ಅಡಿಕೆ, ತಂಬಾಕು ತಿನ್ನುವ ಹವ್ಯಾಸ ಬೆಳಸಿಕೊಂಡ. ಕೆಲಸದವರು ಎಷ್ಟು ದಿನಾ ಅಂತಾ ಇವನಿಗೆ ಬೀಡಿ, ತಂಬಾಕು ಕೊಟ್ಟಾರು? ಕ್ರಮೇಣ ಕೆಲಸಗಾರರು, ಇವತ್ತು ಸ್ವಲ್ಪ ಐತಿ. ನಮಗೆ ಸಾಲದು ಎಂದು ನುಣಿಚಿಕೊಳ್ಳಲಾರಂಭಿಸಿದರು. ಕಲಿತ ಹವ್ಯಾಸ ಕಾಡಲಾರಂಭಿಸಿತು. ಮನೆಯಲ್ಲಿ ಹಣ ಕೇಳಿದರೆ ಯಾತಕ್ಕೆ ಎಂದು ಹೇಳಬೇಕಾಗುತ್ತಿತ್ತು. ಕೊನೆಗೆ ಅದಕ್ಕೆ ಒಂದು ಉಪಾಯ ಹುಡುಕಿದ. ತಮ್ಮದೇ ತೋಟದ ಪೇರಲು ಹಣ್ಣು ಕದ್ದು ಮಾರಾಟ ಮಾಡಲಾರಂಭಿಸಿದ. ಪ್ರತಿ ವಾರದ ಹಣ್ಣಿನ ಇಳುವರಿಯಲ್ಲಿ ಪ್ರಮಾಣ ಕಡಿಮೆಯಾದ ಕುರಿತು ಆತನ ತಂದೆ ಮತ್ತು ಅಣ್ಣಂದಿರಿಗೆ ಸಂಶಯ ಬಂತು. ಕೆಲಸಗಾರರ ಮೇಲೆ ಸಂಶಯ ಮಾಡಲಾರಂಭಿಸಿದರು. ಆದರೆ ಇದ್ದಕ್ಕಿದ್ದಂತೆ ಒಂದು ದಿನ ರಾತ್ರಿ ಭಜನೆಬಸವ ಮನೆಯಲ್ಲಿ ರಾತ್ರಿ ಮಲಗಿದ್ದಾಗ ಕನವರಿಸಲಾರಂಭಿಸಿದ. ‘ಲೇ ಬಾಬಣ್ಣ ತೋಟದ ತಗ್ಗಿನ ಗಿಡದ ಟೊಂಗಿಗೆ ಇನ್ನೂರು ಪೇರ್‍ಲ್ ಹಣ್ಣಿನ ಮಂಕರಿ ಹಾಕೇನಿ ತಗೊಂಡು ಹೋಗು’ ಎಂದ. ಅವನ ಅಣ್ಣ, ತಾಯಿ ಇದನ್ನ ಕೇಳಿಸಿಕೊಂಡರು. ಮರುದಿನ ಮುಂಜಾನೆ ಅವರ ಅಣ್ಣ, ಭಜನೆ ಬಸವಾ ಹೇಳಿದ ಸ್ಥಳಕ್ಕೆ ಹೋಗಿ ನಿಂತ. ಪೇರಲ ಹಣ್ಣು ತೆಗೆದುಕೊಂಡು ಹೋಗುವವನು ಬಂದ. ಇಬ್ಬರು ಕಳ್ಳರನ್ನು ಏಕಕಾಲಕ್ಕೆ ಹಿಡಿದ. ಅಲ್ಲಿಂದ ಮುಂದೆ ಭಜನೆ ಬಸವನ ತಲಬು ಮಾಡಲು ಹಣ ಹೊಂದಿಸುವುದು ಕಷ್ಟವಾಯಿತು. ಮೊದಮೊದಲು ಅಂಗಡಿಗಳಲ್ಲಿ ಸಾಲ ಮಾಡಿದ. ಅವರು ಸಾಲ ಮರಳಿಸಲು ದುಂಬಾಲು ಬಿದ್ದಾಗ, ಮನೆಯಲ್ಲಿ ಹಣಕ್ಕಾಗಿ ಜಗಳ ಮಾಡಲಾರಂಭಿಸಿದ. ಒಂದ್ಸಲ ಕೊಟ್ಟರು, ಎರಡ್ಸಲ ಕೊಟ್ಟರು. ಮುಂದೆ ಕ್ರಮೇಣ ಕಡಿಮೆ ಮಾಡಿದರು. ಸಾಲ ತೀರಿಸದಿದ್ದಾಗ ಅಂಗಡಿವಯವರೇ ಒಂದು ಛೋಲ ಸಲಹೆ ಕೊಟ್ಟರು. ಹಣ ಕೊಡದಿದ್ದರೆ ನಿನ್ನ ಪಾಲಿನ ಆಸ್ತಿ ಕೇಳು ಅಂತಾ. ಈ ಐಡಿಯಾ ನದಿಯಲ್ಲಿ ಮುಳುಗುವವನಿಗೆ ಹುಲ್ಲು ಕಡ್ಡಿ ಆಸರೆ ಸಿಕ್ಕಂತಾಯಿತು. ಆ ಮೇಲೆ ತನ್ನ ಪಾಲಿನ ಆಸ್ತಿ ಕೇಳಲಾರಂಭಿಸಿದ. ಹೀಗೆ ಭಜನೆ ಬಸವನ ತಾಳ ಬೇಸೂರ ಆಗಲಾರಂಭಿಸಿತು. ಅವನ ಮಳ್ಳತನ, ಇನ್ನೊಬ್ಬರ ಹಣದಲ್ಲಿ ದುಶ್ಚಟ, ಅದಕ್ಕಾಗಿ ಮಾಡುವು ಕಳವು, ನಮ್ಮ ರಾಜಕಾರಣಿಗಳು ಕೀಳುವ ಲಂಚ, ಅದಕ್ಕಾಗಿ ಅಧಿಕಾರ, ಸಿಗದಿದ್ದರೆ ಪಕ್ಷ ಒಡೆಯುವ ಇಲ್ಲವೇ ಪಕ್ಷಾಂತರ ಮಾಡುವ ಕೆಲಸ ಹೀಗೆ.... ಭಜನೆ ಬಸವ, ರಾಜಕಾರಣಿಗಳು ನನ್ನ ಮನಸಿನ ಮೇಲೆ ಪರಸ್ಪರ ಓವರ್ ಲ್ಯಾಪ್ ಆಗುತ್ತ ಹೋಗುತ್ತಾರೆ.
ಈ ಲೇಖನ ಕನ್ನಡಪ್ರಭ ಸಾಪ್ತಾಹಿಕ - ೨೫ ನವೆಂಬರ್ ೨೦೦೭ರ ಸಂಚಿಕೆಯಲ್ಲಿ ಪ್ರಕಟವಾದದ್ದು.
Wednesday, November 28, 2007
ಅಂಥವರಿರಬೇಕು ಇಂಥವರ ನಡುವೆ
Subscribe to:
Post Comments (Atom)
No comments:
Post a Comment