Sunday, November 4, 2007

ರಾಜಕೀಯ ರಥದ ಚಕ್ರದಡಿ ಗಡಿ ಚಳವಳಿ... -ಗೋವಿಂದ ಮಡಿವಾಳರ




ಕರಿ ಹೆಂಚು ಹೊದಿಸಿದ ಹಳೆಯದಾದ ಕಟ್ಟಡವೊಂದರಿಂದ ಫೈಲವಾನ್ ನಡಿಗೆಯಲ್ಲಿ ಎಂ.ಇ.ಎಸ್.ನ ಮುಖಂಡರೊಬ್ಬರು ಹೊರಗೆ ಬರುತ್ತಿದ್ದಂತೆ ಬಡಕಲು ದೇಹದ ಯುವಕನೊಬ್ಬ ಅವರ ಮುಂದೆ ಬಂದು ನಿಂತು, ತಾಂಬಾ ಸಾಹೇಬ(ನಿಂತಕೊಳ್ಳಿರಿ) ಎಂದಾಗ, ಆ ಮುಖಂಡರು ಆ ಕ್ಷಣಕ್ಕೆ ಬೆರಗಾಗಿ ನಿಂತರು.
ನಿಮ್ಮ ಮಾತು ಕೇಳಿಕೊಂಡು ನಾವು ಎಂ.ಇ.ಎಸ್.ಚಳವಳಿಯಲ್ಲಿ ಪಾಲ್ಗೊಂಡೆವು. ಕನ್ನಡಿಗರ, ಕರ್ನಾಟಕ ಸರಕಾರದ ಆಸ್ತಿಪಾಸ್ತಿ ಹಾನಿ ಮಾಡಿದ ಆರೋಪದ ಮೇಲೆ ಕಾರಾಗೃಹ ವಾಸ ಅನುಭವಿಸಿ ಈಗ ನಾವು ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದೇವೆ. ಕಾರಾಗೃಹದಿಂದ ಬಿಡುಗಡೆಗೆ ಯಾವುದೇ ಸಹಾಯ ನಿಮ್ಮಿಂದ ಆಗಲಿಲ್ಲ. ನಾವು ಹಣಕ್ಕಾಗಿ ಕೊಲೆ, ಸುಲಿಗೆಯನ್ನು ಅವಲಂಬಿಸಬೇಕಾಯಿತು. ನಮ್ಮ ಬದುಕು ಇವತ್ತು ಬೀದಿಪಾಲಾಗಿದೆ. ನಮಗೆ ಏನು ದಾರಿ ತೋರಿಸುತ್ತಿರಿ ತೋರಿಸಿರಿ ಎಂದು ಅವರ ದಾರಿಗೆ ಅಡ್ಡಗಟ್ಟಿ ನಿಂತ. ಅವರು ನಿಂತಿದ್ದ ಸ್ಥಳದಿಂದ ತೀರಾ ಸಮೀಪದಲ್ಲೇ ಪೊಲೀಸ್ ಠಾಣೆ. ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದರು. ಆ ಯುವಕನನ್ನು ಪೊಲೀಸ್ ಠಾಣೆಗೆ ಎಳೆದುಕೊಂಡು ಹೋದರು.
ಅಲ್ಲಿಗೆ ಮುಗಿಯಿತು. ಆ ಯುವಕನ ಪ್ರಶ್ನೆಗೆ ಎಂ.ಇ.ಎಸ್. ಮುಖಂಡನ ಉತ್ತರ ಅಷ್ಟೇ. ಮುಂದೆ ಆ ಯುವಕ ಕೊಲೆ ಸುಲಿಗೆಯಲ್ಲಿ ಭೂಗತ ಜಗತ್ತನ್ನು ಮೀರಿಸುವಷ್ಟು ಬೆಳೆದು ನಿಂತ. ಬೆಳಗಾವಿಯಲ್ಲಿ ಇದು ಒಬ್ಬ ಯುವಕನ ಪ್ರಶ್ನೆ ಅಲ್ಲ. ಇಂತಹ ಹಲವಾರು ಯುವಕರು ಗಡಿ ವಿವಾದ ಹೋರಾಟದಲ್ಲಿ ಬದುಕನ್ನೇ ಕಳೆದುಕೊಂಡರು. ಅವರಲ್ಲಿ ಹಲವು ಹುಡುಗರು ಭೂಗತ ಜಗತ್ತಿಗೆ ಜಾರಿಕೊಂಡರು. ಬೆಳಗಾವಿ ನಗರದಲ್ಲಿ ಭೂಗತ ಜಗತ್ತಿನ ಎರಡೆರಡು ಗುಂಪುಗಳು ಬೆಳೆದುಕೊಂಡವು. ಅವರು ಕೊಲೆ ಸುಲಿಗೆಯಲ್ಲಿ ತಮ್ಮ ತಮ್ಮಲ್ಲೇ ಸ್ಪರ್ಧೆಗೆ ಇಳಿದರು. ಆ ಯುವಕ ಸೇರಿದಂತೆ ಹಲವಾರು ಯುವಕರು ನಡುಬೀದಿಯ ಹೆಣವಾಗಿ ಹೋದರು. ಇದು ಎಂ.ಇ.ಎಸ್.ನ ಕೊಡುಗೆ.
ಈಗ ಅವರ ಸಂತಾನ ಹೆಚ್ಚಾಗಿ ಈಚೆಗೆ ಪ್ರವೀಣ ಸಿಂತ್ರೆನಂತಹವರು ಎಂತಹ ಅಪಾಯಕಾರಿಯಾಗಿ ಬೆಳೆದರು ಅಂದ್ರೆ, ಹಣಕ್ಕಾಗಿ ಎಲ್ಲೆಂದರಲ್ಲಿ ಸುಫಾರಿ ಕೊಲೆಗಾರನಾಗಿ ಬೆಳೆದು ನಿಂತ. ಕೊನೆಗೆ ಪೊಲೀಸರ ಗುಂಡಿಗೆ ತನ್ನ ಬದುಕನ್ನು ಶರಣಾಗಿಸಿದ. ಹೀಗೆ ಎಂ.ಇ.ಎಸ್.ನ ದೀರ್ಘ ಹೋರಾಟದ ಫಲವಾಗಿ ಇವರು ಬೆಳೆದವರು. ಆ ಹುಡುಗರನ್ನು ನಿಯಂತ್ರಿಸುವ ಕಾರ್ಯಕ್ಕೆ ಎಂ.ಇ.ಎಸ್.ನ ಮುಖಂಡರು ಯಾರೂ ಪ್ರಯತ್ನಿಸಲೇ ಇಲ್ಲ. ಹಿಂಸಾ ಕಾರ್ಯಕ್ಕೆ ಬಳಸಿಕೊಂಡರೇ ವಿನಹ ಒಳ್ಳೆಯ ಕಾರ್ಯಕ್ಕೆ ಅವರನ್ನು ತೊಡಗಿಸುವ ಪ್ರಯತ್ನ ಮಾಡಲೇ ಇಲ್ಲ.
ಎಂ.ಇ.ಎಸ್.ನ ಚಳವಳಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೋಲಿಸಿದರೆ ತೀರಾ ಚಿಕ್ಕದು. ಆದರೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಲಕ್ಷಾಂತರ ಜನರು ಬ್ರಿಟೀಷರ ವಿರುದ್ಧ ಹೋರಾಟ ಮಾಡಿದರು. ಅವರಾರು ಹೀಗೆ ಕೊಲೆ, ಸುಲಿಗೆಗಾರರಾಗಿ ಬೆಳೆಯಲಿಲ್ಲ. ಅವರನ್ನು ಯಾರೂ ಬೆಳೆಯಲು ಪ್ರಚೋದಿಸಲಿಲ್ಲ. ಅವರಿಗೆ ಸ್ಪಷ್ಟವಾಗಿ ಹೋರಾಟದ ಕಲ್ಪನೆ ಮೂಡಿಸಲಾಗಿತ್ತು. ಹೋರಾಟದ ನೇತೃತ್ವ ವಹಿಸಿಕೊಂಡವರು ತಮ್ಮ ಬೆಂಬಲಿಗರ ನಡೆಯನ್ನು ಗಮನಿಸಲೇಬೇಕು. ಗಾಂಧೀಜಿ ಹೇಳುವಂತೆ ‘ಗುರಿ ಜೊತೆಗೆ ಅನುಸರಿಸುವ ಮಾರ್ಗ ಕೂಡಾ ಒಳ್ಳೆದೇ ಇರಬೇಕು’. ಇಲ್ಲದಿದ್ದರೆ ಏನಾಗಬಹುದು ಎಂಬುದಕ್ಕೆ ಎಂ.ಇ.ಎಸ್.ಚಳವಳಿ ಒಂದು ನಿದರ್ಶನ.
ಎಂ.ಇ.ಎಸ್.ಚಳವಳಿಯ ದಾರಿ ತಪ್ಪಲು ಬೆಳಗಾವಿಯಲ್ಲಿನ ಸ್ಥಳೀಯ ರಾಜಕಾರಣಿಗಳು ಮತ್ತು ಕೆಲ ಮರಾಠಿ ಪತ್ರಿಕೆಯ ಮಾಲಿಕರು ಕಾರಣ. ತೀರಾ ಸ್ವಹಿತದ ಸಾಧನೆಗಾಗಿ ಗಡಿ ಚಳವಳಿ ಬಳಸಿಕೊಳ್ಳಲಾರಂಭಿಸಿದರು.
ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುತ್ತದೆ. ನಾವೆಲ್ಲ ನಮ್ಮ ಮಹಾರಾಷ್ಟ್ರದಲ್ಲಿ ಇರುತ್ತೇವೆ. ನಮ್ಮ ಮಕ್ಕಳಿಗೆ ಉದ್ಯೋಗ ಅವಕಾಶ ಸಿಗುತ್ತದೆ. ನಮ್ಮ ಮಕ್ಕಳು ಎಲ್ಲರಂತೆ ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆಯುತ್ತಾರೆ. ನಮ್ಮ ಸಂಸ್ಕೃತಿ, ಸಂಬಂಧಗಳು ಕಳಚಿಕೊಳ್ಳುವುದಿಲ್ಲ ಎಂದು ಕಟ್ಟಿಕೊಂಡ ಜನಸಾಮಾನ್ಯ ಮರಾಠಿಗರ ಕನನಸುಗಳು ಈಗ ಅನಾಥವಾಗಿವೆ.
ರಾಜಕಾರಣಿಗಳ ರಾಜಕೀಯ ಮೇಲಾಟದಲ್ಲಿ ಜನಸಾಮಾನ್ಯ ಮರಾಠಿಗರ ತಮ್ಮ ಸಂಸ್ಕೃತಿ, ಭಾಷೆ, ಸಂಬಂಧಗಳನ್ನು ಕಳೆದುಕೊಳ್ಳುವ ಚಿಂತೆಯ ತೆಕ್ಕೆಗೆ ಸೇರಿದರು. ಕರ್ನಾಟಕ ಸರಕಾರ ಬೆಳಗಾವಿಯ ಮೇಲೆ ತನ್ನ ಪ್ರಭಲವಾದ ಹಕ್ಕು ಸ್ಥಾಪಿಸಲು ಯೋಜನೆ ರೂಪಿಸಲಾರಂಭಿಸಿದ ಮೇಲೆ ರಾಜಕಾರಣಿಗಳು ಅಧಿಕಾರ ಕಳೆದುಕೊಳ್ಳುವ ಅತಂಕದಲ್ಲಿ ಇದ್ದಾರೆ.
ಬೆಳಗಾವಿಯಲ್ಲಿ ೧೯೮೬ನೇ ಸಾಲಿನಿಂದ ರಾಜ್ಯ ಸರಕಾರ ಶಾಲೆಗಳಲ್ಲಿ ಕನ್ನಡ ಕಲಿಕೆ ಕಡ್ಡಾಯಗೊಳಿಸುವ ಮತ್ತು ಮುಂದೆ ಸರಕಾರಿ ನೌಕರಿಗೆ ಸೇರಲು ಕನ್ನಡ ಕಲಿಕೆ ಅಗತ್ಯ ಎಂಬ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರುವಲ್ಲಿ ದಿಟ್ಟ ಹೆಜ್ಜೆ ಇಟ್ಟಾಗ ಮರಾಠಿ ಭಾಷಿಕ ಹುಡುಗರ ಬದುಕಿನ ಹೆಜ್ಜೆಗಳು ನಿಂತಲ್ಲೇ ನಿಂತು ಬಿಟ್ಟವು. ನಿಶಕ್ತವಾದವು. ಎಂಇಎಸ್ ಮುಖಂಡರ ಭರವಸೆ ನಂಬಿ ಮಕ್ಕಳಿಗೆ ಕನ್ನಡ ಕಲಿಸಲು ಮರಾಠಿಗರು ಸರಕಾರದ ಆದೇಶ ವಿರೋಧಿಸಿದರು. ಈಗ ಕೇಂದ್ರದ ಸಚಿವರಾಗಿರುವ ಶರದ ಪವಾರ, ಭಾರತೀಯ ಓಲಂಪಿಕ್‌ನ ಚೇರಮನ್ ಸುರೇಶ ಕಲ್ಮಾಡಿ ಅವರು ಸೇರಿದಂತೆ ಅಂದು ಎಲ್ಲರೂ ಬೆಳಗಾವಿಗೆ ಬಂದು ಬೃಹತ್ ಪ್ರಮಾಣದಲ್ಲಿ ಚಳವಳಿ ನಡೆಸಿದರು. ಕರ್ನಾಟಕ ಸರಕಾರ ಅದಕ್ಕೆ ಮಣಿಯಲಿಲ್ಲ. ಮರಾಠಿ ಭಾಷಿಕರ ಮಕ್ಕಳು ಕನ್ನಡ ಕಾರಣಕ್ಕಾಗಿ ಮಾಧ್ಯಮಿಕ ಶಾಲೆಗೆ ಸೇರುವ ಮುನ್ನವೇ ತಮ್ಮ ಶೈಕ್ಷಣಿಕ ಬದುಕಿನ ದಾರಿಯನ್ನು ಕಳೆದುಕೊಂಡರು. ಹಣವಂತರು ಖಾಸಗಿ ಮರಾಠಿ ಶಾಲೆ, ಕಾಲೇಜುಗಳಲ್ಲಿ ಶಿಕ್ಷಣ ಪಡೆದರೂ ನೌಕರಿಗಾಗಿ ದಿಕ್ಕು ತೋಚದೆ ಕುಳಿತರು. ಮುಂಬಯಿ, ಪುಣೆ, ಕೊಲ್ಲಾಪುರ, ಗೋವಾ ಎಂದು ನೌಕರಿಗಾಗಿ ಅಂಡೆಲೆಯತ್ತಿದ್ದಾರೆ. ಅಲ್ಲಿ ನೆಲೆ ಕಂಡುಕೊಂಡವರು ತೀರಾ ವಿರಳ. ಮರಳಿ ಬೆಳಗಾವಿಗೆ ಬಂದವರೇ ಹೆಚ್ಚು. ಹಾಗೆ ಮರಳಿ ಬಂದವರಲ್ಲಿ ಹೆಚ್ಚಿನವರು ಸಣ್ಣಪುಟ್ಟ ವ್ಯಾಪಾರ,ರಿಕ್ಷಾ, ಟೆಂಪೋ, ಕಾರು ನಡೆಸಲಾರಂಭಿಸಿದರು. ಬಿಸಿ ರಕ್ತದ ಹುಡುಗರು ಎಂ.ಇ.ಎಸ್. ಸಂಘಟನೆಯೊಂದಿಗೆ ಸೇರಿಕೊಂಡು ಮೇಲಿಂದ ಮೇಲೆ ಚಳವಳಿಯಲ್ಲಿ ಪಾಲ್ಗೊಂಡು ವಿದ್ವಂಸಕ ಕೃತ್ಯಗಳಲ್ಲಿ ಪಾಲ್ಗೊಂಡು ಕಾರಾಗೃಹ, ಕೋರ್ಟ್ ಹೀಗೆ ತಮ್ಮ ಬದುಕಿನ ಕನಸುಗಳನ್ನು ಕಳೆದುಕೊಂಡರು. ಅದರಲ್ಲಿ ತೀರಾ ಉಗ್ರ ಸ್ವಭಾವದ ಹುಡುಗರು ಗೂಂಡಾಗಳಾಗಿ ತಮ್ಮದೇ ಆದ ರೀತಿಯ ಭೂಗತ ಜಗತ್ತು ಸೃಷ್ಟಿಸಿಕೊಂಡರು. ಕೈಬೆರಳೆಣೆಸುವಷ್ಟು ಜನರು ನಗರಸೇವಕರಾಗಿ ಆಸ್ತಿ, ಹಣ ಮಾಡಿಕೊಂಡು ನವೆಂಬರ್ ೧ರಂದು ಕರಾಳ ದಿನಾಚರಣೆ ಆಚರಿಸುವುದನ್ನು ಬಿಟ್ಟರೆ, ಪಾಲಿಕೆಯಲ್ಲಿ ‘ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ’ ಅನ್ನುವುದು. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಘೋಷಣೆ ಕೂಗುವುದಷ್ಟಕ್ಕೆ ಸಿಮಿತವಾದರು. ಅದರೆ ಅದರಾಚೆ ಅವರು ಬೆಳಗಾವಿ ನಗರದ ಅಭಿವೃದ್ಧಿ, ಮರಾಠಿಗರ ಬದುಕಿಗೆ ಸುರಕ್ಷತೆ ಭಾವನೆ ಹುಟ್ಟಿಸುವ ರಚನಾತ್ಮಕ ಕಾರ್ಯ ಮಾಡಲೇ ಇಲ್ಲ.
ಎಂ.ಇ.ಎಸ್.ಮುಖಂಡರು ಎಂದು ಹೇಳಿಕೊಳ್ಳುವ ಮರಾಠಿ ಭಾಷಿಕ ಮುಖಂಡರು ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಗಡಿ ಸಮಸ್ಯೆ ಮುಂದೆ ಮಾಡಿ ಹೋರಾಟ ಮಾಡುತ್ತಿದ್ದಾರೆ. ಅವರಿಗೂ ಗೊತ್ತು ಗಡಿ ಸಮಸ್ಯೆ ಬಗೆ ಹರಿಯಲಾರದು ಎಂಬುದು. ಆದರೆ ಅದನ್ನು ಮರಾಠಿ ಜನರಿಗೆ ಮನವರಿಕೆ ಮಾಡಿ ಅವರಿಗೆ ಅವರ ಭಾಷೆ, ಸಂಸ್ಕೃತಿ, ಮಕ್ಕಳಿಗೆ ಉದ್ಯೋಗ ದೊರಕಿಸಿಕೊಡುವ ಪರ್ಯಾಯ ವ್ಯವಸ್ಥೆ ರೂಪಿಸುವ ರಚನಾತ್ಮಕ ಕೆಲಸದಲ್ಲಿ ತೊಡಗಿಸಿಕೊಳ್ಳುವ ಪ್ರಬುದ್ಧತೆ ಅವರಿಗೆ ಇಲ್ಲ. ಪ್ರಬುದ್ಧತೆ ಕೊರತೆಯಿಂದ ಬೆಳಗಾವಿಯಲ್ಲಿನ ಮರಾಠಿಗರ ಬದುಕು, ಬೆಳಗಾವಿ ಅಭಿವೃದ್ಧಿಯನ್ನು ಕುಂಠಿತಗೊಳಿಸಿದ್ದಾರೆ. ಎಂ.ಇ.ಎಸ್. ದೀರ್ಘಕಾಲದ ಚಳವಳಿಯ ಪ್ರತಿಫಲದಲ್ಲಿ ಇದೂ ಒಂದು.
ಇನ್ನೊಂದು ಮುಖ:೧೯೮೬ರಲ್ಲಿ ಬೆಳಗಾವಿ ಜಿಲ್ಲೆಯ ಬೆಳಗಾವಿ, ನಿಪ್ಪಾಣಿ, ಖಾನಾಪುರ, ಉಚಗಾಂವ ಈ ನಾಲ್ಕು ಸ್ಥಳಗಳಲ್ಲಿ ಗಡಿ ಚಳವಳಿ ಜೋರಾಗಿ ನಡೆದಿತ್ತು. ನಿಪ್ಪಾಣಿಯಲ್ಲಿ ಅಂದು ಒಂದು ದಿನ ಕೊಲ್ಲಾಪುರದ ಒಂದು ನೂರು ಫೈಲುವಾನರು ಎಂ.ಇ.ಎಸ್.ಪರವಾಗಿ ಸತ್ಯಾಗ್ರಹ ನಡೆಸಲು ನಿಪ್ಪಾಣಿಗೆ ಬರುವ ಕಾರ್ಯಕ್ರಮ. ಅಲ್ಲಿ ಏನಾದರು ಅನಾಹುತ ಆಗಬಹುದು ಎಂದು ರಾಜ್ಯ ಸರಕಾರ ಮತ್ತು ಜಿಲ್ಲಾ ಆಡಳಿತ ವ್ಯಾಪಕ ಪೊಲೀಸ್ ಬಂದೋ ಬಸ್ತ್ ಮಾಡಿತ್ತು. ಆಗ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಾರಾಯಣ ಅವರು ಕಾರ್ಯನಿರ್ವಹಿಸುತ್ತಿದ್ದರು. ಅವರು ತುಂಬಾ ಖಡಕ್ ಅಧಿಕಾರಿ ಅಂತಲೇ ಹೆಸರು ಪಡೆದವರು. ಅವತ್ತು ನಿಪ್ಪಾಣಿ ಸತ್ಯಾಗ್ರಹ ಸ್ಥಳದಲ್ಲಿ ಹಾಜರಿದ್ದರು. ಆಗಿನ ನಿಪ್ಪಾಣಿ ಶಾಸಕ ವೀರಕುಮಾರ ಪಾಟೀಲ ಅವರು ಸಹ ಅಲ್ಲೇ ಇದ್ದರು. ಆಗ ವೀರುಕಮಾರ ಪಾಟೀಲ ಅವರು ಕಟ್ಟಾ ಎಂ.ಇ.ಎಸ್.ಮನುಷ್ಯ. ಮರಾಠಿ ಭಾಷಿಕ ಜನರು ಭಾರಿ ಪ್ರಮಾಣದಲ್ಲಿ ಸೇರಿದ್ದರು. ಧಂಗೆ ಏಳುವ ಸಾಧ್ಯತೆ ಇತ್ತು. ನಾರಯಣ ಅವರು ನೇರವಾಗಿ ಶಾಸಕ ವೀರಕುಮಾರ ಪಾಟೀಲರ ಬಳಿ ಹೋಗಿ, ಸಾಹೇಬರ ಇಲ್ಲಿ ನೆರೆದಿರುವ ಎಲ್ಲ ಜನರನ್ನು ಇಲ್ಲಿಂದ ಕದಲಲು ಹೇಳಿ. ಗಲಾಟೆ ಆಗುವ ಸಾಧ್ಯತೆ ಇದೆ. ಇದು ಸರಿ ಅಲ್ಲ ಎಂದು ವಿನಂತಿಸಿಕೊಂಡರು. ಆಗ ಅವರು, ಇಲ್ಲ. ಅವರೆಲ್ಲ ಸತ್ಯಾಗ್ರಹಕ್ಕೆ ಬೆಂಬಲಿಸಲು ಬಂದಿದ್ದಾರೆ ಎಂದರು. ಅಷ್ಟರಲ್ಲೇ ಕೆಲವರು ಕಲ್ಲು ತೂರಿದರು. ಆ ಕ್ಷಣದಲ್ಲಿ ಮಿಂಚಿನಂತೆ ನಾರಾಯಣ ಅವರು ತಮ್ಮ ರಿವಾಲ್ವಾರನ್ನು ಶಾಸಕರ ಮುಖಕ್ಕೆ ಹಿಡಿದು, ನಿಮ್ಮ ಜನಕ್ಕೆ ಹೇಳಿ, ಅವರು ಇನ್ನು ಒಂದೇ ಒಂದು ಕಲ್ಲು ತೂರಿದರೆ ನನ್ನ ರಿವಾಲ್ವಾರಿನಿಂದ ಗುಂಡಿನ ಸುರಿಮಳೆ ನಿಮ್ಮ ದೇಹದ ಮುಖಾಂತರ ಆಗುತ್ತದೆ ಎಂದು ಗುಡುಗಿದರು. ಶಾಸಕ ವೀರಕುಮಾರ ಪಾಟೀಲ ತರಗುಟ್ಟಿದರು. ಅವರು ಏನೆಲ್ಲ ಸಮಜಾಯಿಸಿದರೂ ಎಸ್.ಪಿ.ನಾರಾಯಣ ಅವರು ಕೇಳಲಿಲ್ಲ. ಕೊನೆಗೆ ಶಾಸಕರು ಕೈ ಎತ್ತಿ, ಕಲ್ಲು ತೂರಬಾರದು. ಎಲ್ಲರು ಅಲ್ಲಿಂದ ಕದಲುವಂತೆ ಮನವಿ ಮಾಡಿಕೊಂಡರು. ಆಗ ನಾರಾಯಣ ಅವರು ತಮ್ಮ ರಿವಾಲ್ವಾರ ಹಿಂದಕ್ಕೆ ತೆಗೆದುಕೊಂಡರು. ಕೊಲೆಗೆ ಎತ್ನ ಎಂದೆಲ್ಲ ಶಾಸಕರು ಹಾರಾಡಿದರು. ಆದರೆ ಏನೂ ಪ್ರಯೋಜನ ಆಗಲಿಲ್ಲ.
ಮುಂದೆ ಇದೇ ವೀರಕುಮಾರ ಪಾಟೀಲ ಅವರು ಎಂ.ಇ.ಎಸ್.ಸಹವಾಸವನ್ನೇ ತೊರೆದು ಕಾಂಗ್ರೆಸ್ ಪಕ್ಷ ಸೇರಿದರು. ರಾಜ್ಯ ಸರಕಾರದಲ್ಲಿ ಸಚಿವರಾದರು. ನಿಗಮದ ಅಧ್ಯಕ್ಷರಾಗಿ ಕೆಲಸ ಮಾಡಿದರು. ಯಾರು ರಾಜ್ಯ ಸರಕಾರದ ವಿರುದ್ಧ ಶೆಡ್ಡು ಹೊಡೆದು ನಿಂತಿದ್ದರೋ ಅವರೇ ಮುಂದೆ ಅದೇ ಸರಕಾರದ ಸಚಿವರಾಗಿ ಕೆಲಸ ಮಾಡಿದರು. ಅವರು ಕುಟುಂಬದ ಸದಸ್ಯರು ಕರ್ನಾಟಕದ ಪ್ರಮುಖ ವಾಹಿನಿಗೆ ಬಂದು ಬಿಟ್ಟಿದ್ದಾರೆ. ಆದರೆ ಒಂದು ಕಾಲಕ್ಕೆ ಅವರ ಅನುಯಾಯಿಗಳಾಗಿದ್ದವರು ಇಂದಿಗೂ ಇತ್ತ ಕರ್ನಾಟಕವೂ ಇಲ್ಲ. ಅತ್ತ ಮಹಾರಾಷ್ಟ್ರವೂ ಇಲ್ಲ. ಅತಂತ್ರ ಸ್ಥಿತಿಯಲ್ಲಿ ಇದ್ದಾರೆ. ಇದು ಎಂ.ಇ.ಎಸ್.ನ ಕೆಲ ಮುಖಂಡರ ಇನ್ನೊಂದು ಮುಖ ಅಷ್ಟೇ.
ಬದಲಾದ ಶರದ ಪವಾರ:ಒಂದು ಕಾಲಕ್ಕೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಲೇಬೇಕು ಎಂದು ಬೀದಿಗಿಳಿದು ಹೋರಾಟ ಮಾಡಿದವರಲ್ಲಿ ಈಗಿನ ಕೇಂದ್ರ ಸರಕಾರದ ಸಚಿವ ಶರದ ಪವಾರ ಅವರೂ ಒಬ್ಬರು.
೧೯೮೬ರಲ್ಲಿ ಕರ್ನಾಟಕದಲ್ಲಿ ಇರುವ ಎಲ್ಲ ಸರಕಾರಿ ಶಾಲೆಗಳಲ್ಲಿ ಬೋಧನೆ ಮಾಧ್ಯಮ ಕನ್ನಡ. ಎಲ್ಲರೂ ಕನ್ನಡ ಕಲಿಯಬೇಕು ಎಂದು ಕರ್ನಾಟಕ ಸರಕಾರ ಆದೇಶ ಹೊರಡಿಸಿತು. ಮರಾಠಿಗರು ಅದಕ್ಕೆ ಬಲವಾದ ವಿರೋಧ ಮಾಡಿದರು. ಹಿಂಸಾತ್ಮಕವಾದ ಚಳವಳಿ ನಡೆಸಿದರು. ಮಹಾರಾಷ್ಟ್ರದಲ್ಲಿನ ಎಲ್ಲ ರಾಜಕೀಯ ಪಕ್ಷಗಳ ಬೆಂಬಲ ಇತ್ತು. ವಿಚಿತ್ರವೆಂದರೆ ಇದರ ನೇತೃತ್ವವನ್ನು ಹೆಸರಾಂತ ಸಮಾಜವಾದಿ ಎಸ್.ಎಂ. ಜೋಶಿ ಅವರು ವಹಿಸಿದ್ದರು.
ಶರದ ಪವಾರ ಅವರು ಬೆಳಗಾವಿಯಲ್ಲಿ ತಮ್ಮ ಪಕ್ಷದ ಶಾಸಕರು, ಸಂಸದರ ಜೊತೆ ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ಸತ್ಯಾಗ್ರಹ ನಡೆಸುವವರು ಇದ್ದರು. ಇದು ರಾಜ್ಯ ಸರಕಾರಕ್ಕೆ ತೀರೆ ತಲೆನೋವಿನ ಸಂಗತಿಯಾಗಿತ್ತು. ಅಂದಿನ ಮುಖ್ಯಮಂತ್ರಿ ಮನವಿ ಮಾಡಿಕೊಂಡರೂ ಕೇಳದೇ ಗಡಿಭಾಗದಲ್ಲಿ ಪೊಲೀಸ್ ಸರ್ಪಗಾವಲನ್ನು ಭೇದಿಸಿ, ಗುಪ್ತಚರ ಇಲಾಖೆಗೆ ಸುಳಿವು ಸಿಗದಂತೆ ಬೆಳಗಾವಿ ನಗರದಲ್ಲೇ ಒಬ್ಬ ವಿಐಪಿ ಮನೆಯಲ್ಲಿ ಬಚ್ಚಿಟ್ಟುಕೊಂಡು ನಿಗದಿತ ಸಮಯಕ್ಕೆ ಸ್ಥಳಕ್ಕೆ ಬಂದು ಸತ್ಯಾಗ್ರಹ ನಡೆಸಿ ಮರಾಠಿಗರ ಚಳವಳಿಗೆ ಪುಷ್ಟಿಕೊಟ್ಟವರು. ಅಂತಹವರು ಮುಂದೆ ಕೆಲವು ವರ್ಷಗಳ ನಂತರ ಅವರು ಬೆಳಗಾವಿಯಲ್ಲಿ ಮರಾಠಾ ಬ್ಯಾಂಕಿನ ಬೆಳ್ಳಿ ಹಬ್ಬದ ಸಮಾರಂಭಕ್ಕೆ ಅತಿಥಿಯಾಗಿ ಬಂದಿದ್ದರು. ಆಗ ಅವರು ಮಾತನಾಡುತ್ತ. ಗಡಿ ಚಳವಳಿ ಹೆಸರಿನಲ್ಲಿ ನಡೆಸುತ್ತಿರುವ ಬಿಸಿನೆಸ್‌ನ್ನು ಬಂದ್ ಮಾಡಿ. ಬೆಳಗಾವಿ ಅಭಿವೃದ್ಧಿಗೆ ಗಮನಹರಿಸಿ ಎಂದು ಗುಡುಗಿದರು. ವೇದಿಕೆ ಮೇಲೆ, ಕೆಳಗೆ ಕುಳಿತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ ಮುಖಂಡರು, ಸದಸ್ಯರು ಬೆರಗಾಗಿ ಪರಸ್ಪರ ಮುಖ ನೋಡಿಕೊಳ್ಳಲಾರಂಭಿಸಿದರು.
ಇದರರ್ಥ ಇಷ್ಟೇ. ಬೆಳಗಾವಿಯಲ್ಲಿ ಎಂ.ಇ.ಎಸ್. ಮರಾಠಿ ಭಾಷಿಕ ಜನರ ಆಶಯದಂತೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಪ್ರಾಮಾಣಿಕ ಪ್ರಯತ್ನದ ಬದಲು, ರಾಜಕೀಯ ಹಿತಾಸಕ್ತಿ, ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬುದು ಕೂಡಾ ಪವಾರ ಅವರು ಮನಗಂಡು ಈ ರೀತಿ ಗುಡುಗಿದ್ದರು. ಇಷ್ಟೆಲ್ಲ ಅವರ ಸಾರ್ವಜನಿಕ ಸಮಾರಂಭದಲ್ಲೇ ಮರಾಠಿ ಮುಖಂಡರಿಗೆ ಛೀಮಾರಿ ಹಾಕಿದರು ಎಂ.ಇ.ಎಸ್.ನ ಬೆಳಗಾವಿ ಮುಖಂಡರು ಅಭಿವೃದ್ಧಿಪರ ಚಿಂತನೆ ಮಾಡುತ್ತಿಲ್ಲ.
ಹಾಗಾದರೆ ಶರದ ಪವಾರ ಅವರು ಈಗ ಗಡಿ ವಿಷಯದಲ್ಲಿ ಸುಮ್ಮನಿದ್ದಾರೆ ಎಂದು ಹೇಳುತ್ತಿಲ್ಲ.ಕೋರ್ಟಿನ ಅಂಗಳಕ್ಕೆ ವಿವಾದ ತಳ್ಳಿ ಅಲ್ಲಿ ಮರಾಠಿಗರಿಗೆ ನ್ಯಾಯಕೊಡಿಸುತ್ತೇವೆ ಎಂದು ಹೇಳಿ ಚಳವಳಿಯನ್ನು ಜಾರಿಯಲ್ಲಿ ಇಟ್ಟಿದ್ದಾರೆ.
ಈ ಲೇಖನ ಕನ್ನಡಪ್ರಭ ಸಾಪ್ತಾಹಿಕ - ೪ ನವೆಂಬರ್ ೨೦೦೭ರ ಸಂಚಿಕೆಯಲ್ಲಿ ಪ್ರಕಟವಾದದ್ದು.

No comments: