Sunday, October 28, 2007

ಹುಲಿಯಪ್ಪ


ವನವೇ ಕಡಿಮೆಯಾಗಿರುವಾಗ ಜೀವಿಗಳೂ ಅದೇ ರೀತಿ ಕಡಿಮೆಯಾಗುತ್ತಿವೆ. ಅದೇನೇ ಇದ್ದರೂ ಮಲೆನಾಡು ಜನ, ಬಡುಕಟ್ಟು ಜನಾಂಗದಲ್ಲಿರುವ ಹುಲಿಯಪ್ಪ ದೇವರ ಕಲ್ಪನೆ ವಿಶಿಷ್ಟ. ದನ, ಜನರ ಒಳಿತಿಗೆ ಪಾರ್ಥಿಸುವುದೇ ಹುಲಿ(ಹುಲ್ ದೇವರು) ದೇವನ ಪೂಜೆಯ ಒಳಾರ್ಥ. ಕಾಡಿನ ರಾಜಾ ಹುಲಿ, ನಾಡಿಗೆ ಬಂದು ಹಿಂಸೆ ಮಾಡದಂತೆ ಹುಲಿಯ ಆರಾಧನೆ. ಮಲೆನಾಡಿನ ಹಲವೆಡೆ ಇರುವ ಪದ್ಧತಿ ವಿಶಿಷ್ಟ.

ವಿಘ್ನ ಉಂಟುಮಾಡುವರನ್ನು ಸಂಪ್ರೀತಗೊಳಿಸಿ ವಿಘ್ನನಿವಾರಣೆ ಮಾಡುವುದು ಒಂದು ವಿಧ. ವಿಘ್ನ ಕಾರಣವನ್ನೇ ನಾಶ ಮಾಡುವುದು ಇನ್ನೊಂದು ಬಗೆ. ವ್ಯಾಘ್ರನ ವಿಘ್ನ ನಿವಾರಣೆಗೆ (ಹುಲಿಯನ್ನು) ಸಂಪ್ರೀತಗೊಳಿಸುವ, ಪೂಜೆ, ಪುನಸ್ಕಾರ ಸಲ್ಲಿಸುವ ಕ್ರಮ ನಮ್ಮದು. ಆದರೆ ಇಂದು ಹುಲಿ ನಾಶವಾಗಿದ್ದು ಬೇರೆಯದೇ ಕಾರಣಗಳಿಂದ. ಹುಲಿ ನಾಶಕ್ಕೆ ಕಾರಣ ಏನಿದ್ದರೂ ರಕ್ಷಣೆ ಕೋರಿ ವಿಶೇಷವಾಗಿ ರೈತರು, ಗ್ರಾಮೀಣ ಜನರು ಭಯದಿಂದ ಹುಲಿಗೆ ಪೂಜೆ ಸಲ್ಲಿಸುವ ಪದ್ಧತಿ ಮಲೆನಾಡಿನಲ್ಲಿದೆ.
ಯಾವ ವರ್ಷ ಊರಿನ ಪಕ್ಕವೇ ಹುಲಿ ಕಾಣಿಸಿಕೊಳ್ಳುತ್ತದೆಯೋ, ನಾಡಿಗೆ ಹುಲಿ ಬಂದು ದನ ಮುರಿದು ತಿನ್ನುತ್ತದೆಯೋ ಆವರ್ಷ ಹುಲಿ ದೇವರಿಗೆ ಪೂಜೆ ಸರಿಯಾಗಿಲ್ಲ. ಅಥವಾ ಮಾಡಿದ ಪೂಜೆಯಲ್ಲಿ ಏನೋ ತೊಂದರೆ ಇದೆ. ಹೀಗೊಂದು ನಂಬಿಕೆ ಮಲೆನಾಡಿನ ಜನರದ್ದು. ಹೀಗಾಗಿ ವರ್ಷವೂ ಹುಲಿ ಪೂಜೆ ನಡೆಯಲೇ ಬೇಕು.
ಊರ ಹೊರ ಭಾಗದ ಅರಣ್ಯ ಪ್ರದೇಶದಲ್ಲಿ ಹುಲಿ ದೇವರ ಪ್ರತಿಷ್ಠಾಪನೆ ಮಾಡಿ ಪೂಜಿಸುವುದು ಪಾರಂಪರಿಕ ಪದ್ಧತಿ. ಕಪ್ಪು ಕಲ್ಲಿನಲ್ಲಿ ಕೆತ್ತಿದ ಹುಲಿಯ ಮೂರ್ತಿಗೆ ಪೂಜೆ. ಎಲ್ಲ ಊರು, ಹೋಬಳಿ ಒಂದು ಹುಲಿ ದೇವರ ಕ್ಷೇತ್ರಕ್ಕೆ ಒಳಪಟ್ಟಿರುತ್ತದೆ. ಕೃಷಿಕರು, ಗ್ರಾಮೀಣ ಜನ ಆ ಹುಲಿ ದೇವರಿಗೆ ನಡೆದುಕೊಳ್ಳುತ್ತಾರೆ. ಅಥವಾ ಪೂಜೆ ಸಲ್ಲಿಸುತ್ತಾರೆ. ಕೆಲವೊಮ್ಮೆ ಹರಕೆ ಹೊತ್ತುಕೊಳ್ಳುವುದೂ ಇದೆ. ಹೀಗೆ ಮಾಡುವುದರಿಂದ ಹುಲಿ ಊರಿಗೆ ಬಂದು ಹೈನು(ಎಮ್ಮೆ, ಆಕಳು, ಹೋರಿ)ಗಳನ್ನು ಮುರಿದು ತಿನ್ನುವುದಿಲ್ಲ ಎಂಬ ಬಲವಾದ ನಂಬಿಕೆ ಅವರದ್ದು.
ಹುಲಿ ದೇವರಿಗೆ ಪ್ರತ್ಯೇಕ ದೇವಸ್ಥಾನವೂ ಶಿರಸಿ ತಾಲೂಕಿನ ತೈಲಗಾರಿನಲ್ಲಿದೆ. ಇಲ್ಲಿ ಹುಲಿ ದೇವರ ಕಾರ್ತಿಕವೂ ನಡೆಯುತ್ತದೆ. ಬಹುತೇಕ ಕಡೆ ಕಾಡಿನಲ್ಲಿ ಹುಲಿ ಮೂರ್ತಿ ಪ್ರತಿಷ್ಠಾಪಿಸಿ ಅದಕ್ಕೆ ಪೂಜೆ ಸಲ್ಲಿಸುತ್ತಾರೆ.
ಮನುಷ್ಯನಿಗೆ ಹುಲಿ ತೊಂದರೆ ನೀಡದಿದ್ದರು, ಕಾಡು, ಬೆಟ್ಟದಲ್ಲಿ ಮೇವು ಹುಡುಕಿಕೊಂಡು ಹೋಗುವ ಆಕಳು, ಎಮ್ಮೆಯ ಮೇಲೆ ಆಕ್ರಮಣ ಮಾಡುವುದು ಆಗಾಗ ನಡೆಯುತ್ತಿತ್ತು. ಹುಲಿಗೆ ಇದು ಸುಲಭದ ಬೇಟೆಯೂ ಆಗಿತ್ತು. ಊರಿನಲ್ಲಿ ಒಂದೆರಡು ದನಗಳು ವರ್ಷದಲ್ಲಿ ಹೀಗೆ ಹುಲಿಯ ಬಾಯಿಗೆ ತುತ್ತಾಗುತ್ತಿದ್ದವು.
ತೊಂದರೆ ಕೊಡದಂತೆ ಹುಲಿ ದೇವರ ಆರಾಧನೆ ಮಾಡುವುದು ಒಂದು ಕಾಲದಲ್ಲಿ ಹುಲಿಯ ಕಾಟ ಹೆಚ್ಚಿರುವುದನ್ನೂ ಹೇಳುತ್ತದೆ. ಆಚರಣೆಯ ಹಿಂದೆ ಇರುವ ಭಯ, ಭಕ್ತಿಯೂ ಇದನ್ನು ಹೇಳುತ್ತದೆ. ಹಾಗಂತ ಕಾಟ ಕೊಡದಂತೆ ಅಷ್ಟೇ ಪೂಜೆ ಸಲ್ಲಿಸುವುದಲ್ಲ. ಆದರೆ ಹುಲಿಯಿಂದ ಯಾವುದೇ ಜೀವ ಹಾನಿಯಾಗದಂತೆ ಬೇಡಿಕೊಳ್ಳವುದೇ ಹುಲಿ ಆರಾಧನೆಯ ಮುಖ್ಯ ಉದ್ದೇಶ. ಹಿಂದೂಗಳು ಹುಲಿಯಲ್ಲಿ ವಿಷ್ಣುವನ್ನು ಕಾಣುತ್ತಾರೆ. ಲಕ್ಷ್ಮಿಯ ವಾಹನವೂ ಹೌದು.
ಹುಲಿ ದೇವರ ಪೂಜೆ ಎಲ್ಲಿ ನಡೆಯುತ್ತದೆಯೋ ಆ ಪ್ರದೇಶದಲ್ಲಿ ಮೊದಲು ಹುಲಿ ವಾಸವಾಗಿತ್ತು ಎಂಬುದನ್ನು ಸೂಚಿಸುತ್ತದೆ. ಅಲ್ಲದೆ ಈ ಪ್ರದೇಶದಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಇತ್ತು ಎಂದರ್ಥ. ಇಂದು ಹುಲಿ ದೇವರಿರುವ ಪ್ರದೇಶ ನಗರ ಅಥವಾ ಜನ ವಸತಿ ಪ್ರದಶದಲ್ಲಿ ಸೇರಿದೆ ಎನ್ನುತ್ತಾರೆ ಶಿವಾನಂದ ಕಳವೆ.
ಉತ್ತರ ಭಾರತದಲ್ಲೂ ಬುಡಕಟ್ಟು ಜನಾಂಗದವರು ಹುಲಿ ದೇವರನ್ನು ಪೂಜಿಸುವ ಬಗ್ಗೆ ಉಲ್ಲೇಖಗಳಿವೆ. ಅಲ್ಲಿ ಹುಲಿ ದೇವರಿಗೆ ಬಾಘೇಶ್ವರ ಎಂದು ಕರೆಯುತ್ತಾರೆ.
ಟಿ ತೈಲಗಾರ:ಶಿರಸಿ ತಾಲೂಕಿನ ತೈಲಗಾರ ಬಳಿಯ ಹುಲಿ ದೇವರ ಜಾತ್ರೆ, ಪೂಜೆ ತಾಲೂಕಿಗೆ ಪ್ರಸಿದ್ಧ. ಇಲ್ಲಿ ಹುಲಿ ದೇವರಿಗೆ ವರ್ಷಕ್ಕೆ ಆರು ಪೂಜೆ. ಕಾರ್ತಿಕ ಮಾಸದ ಅಮಾವಾಸ್ಯೆಗೆ ವಿಶೇಷ ಪೂಜೆ, ಕಾರ್ತಿಕ ಆಚರಿಸುತ್ತಾರೆ. ಶಿರಸಿಯಿಂದ- ಹುಲೇಕಲ್ ವರೆಗೆ ಹುಲಿ ದೇವರ ಕ್ಷೇತ್ರ. ಸಾವಿರ ಮನೆಗಳು ಇಲ್ಲಿವೆ. ಕ್ಷೇತ್ರದಲ್ಲಿ ಹುಲಿಯಿಂದ ಯಾವುದೇ ತೊಂದರೆಯಾಗದಂತೆ ಪ್ರಾರ್ಥಿಸಿ, ಪೂಜೆ ಸಲ್ಲಿಸುತ್ತಾರೆ.
ಪಂಚಲಿಂಗ:ಶಿರಸಿ ತಾಲೂಕಿನ ಪಂಚಲಿಂಗ, ಸುತ್ತಲಿನ ಹತ್ತಾರು ಗ್ರಾಮಗಳು ಹುಲಿ ದೇವನಿಗೆ ದೀಪಾವಳಿಯಂದು ಪೂಜೆ ಸಲ್ಲಿಸುತ್ತಾರೆ. ದೇವಿಕಾನಿನಲ್ಲಿರುವ ಹುಲಿದೇವರಲ್ಲಿ ಕ್ಷೇತ್ರದಲ್ಲಿ ಹುಲಿಯಿಂದ ತೊಂದರೆಯಾಗಂದೆ ಒಟ್ಟಾಗಿ ಪ್ರಾರ್ಥಿಸುತ್ತಾರೆ.
ಕಂಚೀಕೈ :(ಸಿದ್ದಾಪುರ ತಾಲೂಕು) ಕಡಕಾರ, ಕಂಚಿಕೈ, ಅಸಬಾಳ, ಬನ್ನಿಮನೆ ಸೇರಿದಂತೆ ಇತರ ಗ್ರಾಮಗಳು ಕಡಕಾರ ಹುಲಿ ದೇವನಿಗೆ ಭಕ್ತರು. ಪ್ರತಿ ವರ್ಷ ದೀಪಾವಳಿಯಿಂದು ಹುಲಿ ದೇವರಿಗೆ ಪೂಜೆ. ಹಬ್ಬದ ದಿನ ಕಲ್ಲಿನ ಹುಲಿ ದೇವರನ್ನು ಶೃಂಗರಿಸುತ್ತಾರೆ. ಪ್ರತಿ ದನಕ್ಕೆ ಒಂದು ಕಾಯಿ ಅಥವಾ ಕೊಟ್ಟಿಗೆಯಲ್ಲಿ ಎಷ್ಟು ಹೈನು ಇದೆಯೆ ಅಷ್ಟು ತೆಂಗಿನ ಕಾಯಿಯನ್ನು ಹುಲಿ ದೇವರಿಗೆ ಇಟ್ಟು ಪೂಜಿಸಿ, ಒಡೆಯುತ್ತಾರೆ. ಪ್ರತಿ ವರ್ಷ ಎಲ್ಲ ಮನೆಯೂ ಸೇರಿ ಸುಮಾರು ೧,೪೦೦ಕ್ಕೂ ಹೆಚ್ಚು ತೆಂಗಿನ ಕಾಯಿ ಒಡೆದು ಪೂಜೆ ಸಲ್ಲಿಸುತ್ತಾರೆ. ಕಾಯಿ ಒಡೆಯಲು ಪ್ರತ್ಯೇಕ ಸ್ಥಳವೇ ಇಲ್ಲಿದೆ. ಹೀಗೆ ಮಾಡುವುದರಿಂದ ಹುಲಿ ಗ್ರಾಮಕ್ಕೆ ಬಂದು ದನ ಕರುಗಳನ್ನು ತಿನ್ನುವುದಿಲ್ಲ. ಮನುಷ್ಯರಿಗೂ ತೊಂದರೆ ಮಾಡುವುದಿಲ್ಲ ಎಂಬುದು ಇಲ್ಲಿನ ಆಚರಣೆಯ ಹಿಂದಿರುವ ನಂಬಿಕೆ.
ಕಡಕಾರ ಗೋಪಾಲ ಹೆಗಡೆ ಹೇಳುವ ಅನುಭವ ಕೇಳಿ: ಸುಮಾರು ೨೦ ವರ್ಷಗಳ ಹಿಂದೆ ರಾತ್ರಿ ಊರಿನ ಪಕ್ಕ ಹುಲಿ ಬಹು ಕಾಲ ಘರ್ಜಿಸುತ್ತಿತ್ತು. ಊರಿನವರಿಗೆ ಏನು ಮಾಡುವುದೆಂದು ತೋಚಲಿಲ್ಲ. ನಾಲ್ಕಾರು ಮಂದಿ ಸೇರಿ ಕಲ್ಲಿನ ಹುಲಿ ದೇವರು ಇರುವ ಸ್ಥಳಕ್ಕೆ ಹೋದರು. ಮರದ ಟೊಂಗೆ ಕಲ್ಲು ಹುಲಿ ಮೇಲೆ ಬಿದ್ದಿತ್ತು. ಇದಕ್ಕೆ ಹುಲಿ ಘರ್ಜಿಸುತ್ತಿತ್ತು. ಟೊಂಗೆ ತೆಗೆದ ಮೇಲೆ ಹುಲಿ ಘರ್ಜನೆ ನಿಂತಿತ್ತು.
ಆದರೆ ಇಂದು ಹುಲಿ ಸಂಖ್ಯೆಯೇ ಕಡಿಮೆಯಾಗುತ್ತಿದೆ. ಅಭಯಾರಣ್ಯ, ಸಂರಕ್ಷಿತ ಅರಣ್ಯ ಅಥವಾ ಪ್ರಾಣಿಸಂಗ್ರಹಾಲಯದಲ್ಲಿಯೇ ಬಹುತೇಕ ಹುಲಿಗಳಿವೆ. ಸ್ವಚ್ಛಂದವಾಗಿ ಕಾಡಿನಲ್ಲಿ ಓಡಾಡಿಕೊಂಡು ಇರುವ ಹುಲಿಗಳ ಸಂಖ್ಯೆ ತೀರಾ ಕಡಿಮೆ. ಅದರಲ್ಲೂ ನಾಡಿಗೆ ಹುಲಿ ಲಗ್ಗೆ ಇಡುವುದು ಇಲ್ಲವೇ ಇಲ್ಲ. ನರ ಭಕ್ಷಕ ಹುಲಿ ಹೊಡೆಯಲು ಜಿಮ್ ಕಾರ್ಬೆಟ್ ಅಂತಹವರೂ ಬೇಕಾಗಿಲ್ಲ. ಮೊದಲಿನಂತೆ ಹುಲಿ ಇಲ್ಲ ಎಂದು ಗ್ರಾಮೀಣ ಜನ ಹುಲಿ ದೇವರಿಗೆ ಪೂಜೆ ಸಲ್ಲಿಸುವುದನ್ನೇನೂ ನಿಲ್ಲಿಸಿಲ್ಲ. ಹುಲಿ ಎಲ್ಲೇ ಇರಲಿ, ತೊಂದರೆಯಾಗದಿರಲಿ ಎಂದು ಮೊದಲಿನಂತೆ ಇಂದಿಗೂ ಕಲ್ಲಿನ ಹುಲಿಯಪ್ಪನ ಮೂರ್ತಿಗೆ ಪೂಜೆ ಮಾಡುತ್ತಾರೆ. ಹುಲಿ ದೇವರ ಪೂಜೆ ಒಂದು ಸಂಪ್ರದಾಯ. ಅದೊಂದು ಆಚರಣೆ.



ಹುಲಿಗಳೆಷ್ಟು? :ದೇಶದಲ್ಲಿ ಐದು ದಶಕಗಳ ಹಿಂದೆ ೫೦ ಸಾವಿರದಷ್ಟು ಹುಲಿಗಳಿದ್ದವು. ೨೦೦೧ರಲ್ಲಿ ನಡೆಸಲಾದ ಹುಲಿ ಗಣತಿ ಪ್ರಕಾರ ದೇಶದಲ್ಲಿ ಒಟ್ಟು ೩೬೪೨ ಹುಲಿಗಳಿವೆ. ಈ ಪೈಕಿ ಮಹಾರಾಷ್ಟ್ರದಲ್ಲಿ ೭೧೦ ಹುಲಿ ಇದ್ದರೆ ರಾಜ್ಯದಲ್ಲಿ ೪೦೧ ಹುಲಿಗಳಿದ್ದವು.
ಹೊಡೆದದ್ದೆಷ್ಟು ? : ನೈಜ ಲೆಕ್ಕೆ ಸಿಗುವುದು ಅಸಾಧ್ಯದ ಮಾತು. ಆದರೆ ೧೯೯೯ ಮತ್ತು ೨೦೦೩ರ ಅವಧಿಯಲ್ಲಿ ೧೧೪ ಹುಲಿ ಬೇಟೆಯಾಡಲಾಗಿದೆ ಎಂದು ೨೦೦೫ರಲ್ಲಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಒಟ್ಟು ೧೭೩ ಹುಲಿಗಳು ಸತ್ತಿದ್ದು ಈ ಪೈಕಿ ೫೯ ಹುಲಿಗಳು ಸಹಜವಾಗಿ ಸತ್ತಿದ್ದವು.
ರಾಜಸ್ಥಾನದ ಸಾರಿಸ್ಕಾ ಅಭಯಾರಣ್ಯದ ಎಲ್ಲ ಹುಲಿಗಳ ಸಾವು ಇಂದಿಗೂ ನಿಗೂಢ. ದಾಖಲೆ ಪ್ರಕಾರ ಅಲ್ಲಿ ೧೮ ಹುಲಿಗಳಿದ್ದವು. ಆ ಪೈಕಿ ಎರಡು ಹುಲಿಗಳು ಸಹಜವಾಗಿ ಸತ್ತಿದ್ದವು. ಉಳಿದ ಹುಲಿಗಳು ಏನಾದವು ಎಂಬುದೇ ಪತ್ತೆಯಾಗಲಿಲ್ಲ.
ಕರ್ನಾಟಕದ ದಾಂಡೇಲಿಯ ಅಣಶಿ ಸೇರಿದಂತೆ ದೇಶದ ಏಳು ಪ್ರದೇಶದಲ್ಲಿ ವ್ಯಾಘ್ರ ಸಂರಕ್ಷಣಾ ವಲಯ ಅಭಿವೃದ್ಧಿ ಪಡಿಸಲು ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯ ಒಪ್ಪಿದೆ. ಇದರೊಂದಿಗೆ ದೇಶದಲ್ಲಿ ೩೫ ವ್ಯಾಘ್ರ ಸಂರಕ್ಷಣಾ ವಲಯಗಳಾಗಲಿದೆ.

‘ಬೆಟ್ಟಣ್ಣೆ’
ಈ ಲೇಖನ ಕನ್ನಡಪ್ರಭ ಸಾಪ್ತಾಹಿಕ ಅಕ್ಟೋಬರ್ ೨೦೦೭ರ ಸಂಚಿಕೆಯಲ್ಲಿ ಪ್ರಕಟವಾದದ್ದು.

No comments: