Tuesday, July 1, 2008

ಮಳೆ ಮಹಾದೇವನ ನೆನೆಯುತ

  • ಗೋವಿಂದ ಮಡಿವಾಳರ
ಗುರ್ಜಿ ಗುರ್ಜಿ ಎಲ್ಲಾಡಿ ಬಂದೀ,
ಹಳ್ಳಕೊಳ್ಳ ಸುತ್ತಿ, ಮಲ್ಲಾಡ್ಕ ಹೋಗಿ ಮಳೆ ತಂದೆ,
ಸುರಿಯೋ ಸುರಿಯೋ ಮಳೆರಾಯ....


ಎಂದು ಹಾಡಿಕೊಂಡು ಮುಂಗಾರ ಮಳೆ ಆರಂಭಕ್ಕೆ ವಿಳಂಬವಾದರೆ ದೇಶದ ಗ್ರಾಮೀಣ ಭಾಗದ ಮಕ್ಕಳು, ಮಹಿಳೆಯರು ಸೆಗಣಿ ಗುರ್ಜಿಯನ್ನು ತಲೆಯ ಮೇಲೆ ಇಟ್ಟುಕೊಂಡು ಗ್ರಾಮದ ಓಣಿ, ಓಣಿಗಳಲ್ಲಿ ಸುತ್ತಾಡುತ್ತಾರೆ.
ಹವಾಮಾನ ವೈಪರಿತ್ಯದಿಂದ ಮಳೆ ಬರುವುದು ವಿಳಂಬವಾದರೆ ರೈತ ಹೊಲ ಹಸನ ಮಾಡಿಕೊಂಡು ಬಿತ್ತನೆಗಾಗಿ ಮುಗಿಲತ್ತ ನೋಡುತ್ತಾ ಚಿಂತಾ ಕ್ರಾಂತನಾಗಿ ಕುಳಿತಾಗ ಗ್ರಾಮೀಣ ಜನತೆ ಮಳೆ ರಾಯನ ಆರಾಧನೆಯಲ್ಲಿ ತೊಡಗುತ್ತಾರೆ. ಮಳೆರಾಯನ ಆರಾಧನೆ ಒಂದೊಂದು ಊರಲ್ಲಿ ಒಂದೊಂದು ತರಹ ಆಚರಣೆ.
ನಮ್ಮೂರಲ್ಲಿ ಬಾಲಕರು, ಮಹಿಳೆಯರು ಸೇರಿಕೊಂಡು ಸೆಗಣಿ ಗುರ್ಜಿ ಮಾಡಿ, ಅದನ್ನು ರೊಟ್ಟಿ ಮಾಡುವ ಹಂಚಿನ ಮೇಲೆ ಇಟ್ಟು ಅದನ್ನು ತಲೆಮೇಲೆ ಹೊತ್ತು ಗ್ರಾಮದ ಓಣಿ, ಓಣಿಗಳಲ್ಲಿ ಮನೆಬಾಗಿಲಿಗೆ ಹೋದರೆ ಮನೆಯವರು ಒಂದು ತಂಬಿಗೆ ಅಥವಾ ಒಂದು ಕೊಡ ನೀರು ತಂದು ಗುರ್ಜಿ ಹೊತ್ತವರ ತಲೆ ಮೇಲಿಂದ ಮತ್ತು ಗುರ್ಜಿಗೆ ನೀರು ಬೀಳುವ ಹಾಗೆ ಸುರುವುತ್ತಾರೆ. ಆಗ ಗುರ್ಜಿ ಹೊತ್ತವನು ಸೆಗಣಿ ಗುರ್ಜಿಯು ಸುರಿಯುವ ನೀರಿಗೆ ಕರಗಿ ಹೋಗಬಾರದು ಎಂದು ಸ್ಪೀಡಾಗಿ ತಿರುಗುತ್ತಾನೆ. ಆಗ ಅದನ್ನು ನೋಡಲು ಸುತ್ತಮುತ್ತ ನಿಂತವರಿಗೆಲ್ಲ ನೀರು ಸಿಡಿಯುತ್ತದೆ. ಎಲ್ಲರೂ ಹೋ ಎಂದು ಬುಗುರೆ ತರಹ ತಿರುಗಿ ಸಂಭ್ರಮ ಪಡುತ್ತಾರೆ. ನೀರು ಹಾಕಿದವರು ಪೂಜೆ ಮಾಡಿ, ಜೋಳ ಕೊಡುತ್ತಾರೆ. ಗುರ್ಜಿಗೆ ಪೂಜೆ ಮಾಡುತ್ತ ಮಹಾದೇವ ಮಳೆ ಕೊಡಪ್ಪ, ಬೆಳೆ ಚೆನ್ನಾಗಿ ಬರಲಿ ಎಂದು ಬೇಡಿಕೊಳ್ಳುತ್ತಾರೆ.
ಹೀಗೆ ಗ್ರಾಮದ ಎಲ್ಲ ಓಣಿಗಳಲ್ಲಿ ಸುತ್ತಾಡುತ್ತಾರೆ. ಹುಡುಗರ ದಂಡೇ ಇರುತ್ತದೆ. ಕೆಲ ಹುಡುಗರು ರಾಗಬದ್ದವಾಗಿಗುರ್ಜಿ.. ಗುರ್ಜಿ ಎಲ್ಲಾಡಿ ಬಂದಿ ಎಂದು ಹಾಡುತ್ತಿದ್ದರೆ, ಇನ್ನು ಕೆಲ ಹುಡುಗರು ಹಳ್ಳಾಕೊಳ್ಳಾ ಸುತ್ತಿ ಮಲ್ಲಾಡ್ಕ ಹೋಗಿ ಮಳೆ ತಂದೆ..... ಎಂದು ಅವರು ಅಷ್ಟೇ ರಾಗ ಬದ್ದವಾಗಿ ಹಾಡುತ್ತಲೇ ಇರುತ್ತಾರೆ. ಮತ್ತೆ ಕೆಲವರುಸುರಿಯೋ ಸುರಿಯೋ ಮಳೆರಾಯ... ಎಂದು ಮಳೆ ರಾಯನ ಬಳಿ ಬೇಡುವ ಪರಿ ಇದು.
ಗ್ರಾಮ ಸುತ್ತಿದ ಮೇಲೆ ಜನರು ಕೊಟ್ಟ ಜೋಳವನ್ನು ಹಸನ ಮಾಡಿ ಗಿರಣಿಗೆ ಹೋಗಿ ನುಚ್ಚು ಮಾಡಿಸಿ ತಂದು ಅದನ್ನೇ ನುಚ್ಚು ಮಾಡಿಸಿ(ಸಂಗಟಿ, ಅಂಬ್ಲಿ, ಹೀಗೆ ವಿವಿಧ ಗ್ರಾಮಗಳಲ್ಲಿ ಅದನ್ನು ಕರೆಯುವ ರೂಢಿ.) ರಾತ್ರಿ ಊರಿಗೆಲ್ಲ ಊಟಕ್ಕೆ ನುಚ್ಚಿನ ಊಟ ಹಾಕಿಸುತ್ತಾರೆ.
ಊಟಕ್ಕೆ ಮುನ್ನ ಗ್ರಾಮದ ಮಹಿಳೆಯರು, ಹಿರಿಯರು ಸೇರಿ ಮಹಾದೇವನ ಸ್ಮರಣೆ ಕಾರ್ಯಕ್ರಮ ನಡೆಸುತ್ತಾರೆ. ಮಳೆರಾಯನ ಕುರಿತಾದ ಹಾಡುಗಳನ್ನು ಹಾಡುತ್ತಾರೆ. ಕೆಲ ಮುತ್ತೈದೆಯರನ್ನು ಕುಳ್ಳರಿಸಿ ಅವರಿಗೆ ಎಲ್ಲರಿಗಿಂತಲೂ ಮೊದಲು ಉಡಿ ತುಂಬಿಸಿ, ಊಟಕ್ಕೆ ಹಾಕಿ ನಂತರ ಎಲ್ಲರಿಗೂ ನುಚ್ಚು ಮತ್ತು ಬೇಳೆ ಸಾರಿನ ಊಟ ಹಾಕಿಸುತ್ತಾರೆ. ಇಂತಹ ಸಂಭ್ರಮ ರಾತ್ರಿಯಲ್ಲಾ ನಡೆಯುತ್ತದೆ.
ಹೀಗೆ ಮಾಡುವಾಗೆಲ್ಲ ಏನಾದರು ತುಂತುರ ಮಳೆ ಸುರಿದರೆ ಕುಂತ ಜಾಗದಿಂದ ಮನೆಗೆ ಓಡಿಹೋಗಿ ಬಚ್ಚಿಟ್ಟುಕೊಳ್ಳದೇ ಅಲ್ಲೇ ಯುವಕರು, ಯುವತಿಯರು ಪ್ರತ್ಯೇಕವಾಗಿ ಪರಸ್ಪರ ಕೈಗಳನ್ನು ಕ್ರಾಸ್ ಮಾಡಿ ಹಿಡಿದುಕೊಂಡು ಟಿ ಕಳ್ಳ ಮಳೆ, ಕಪಟ ಮಳೆ, ಸುಣ್ಣಾ ಕೊಡ್ತೇನಿ, ಬಣ್ಣಾ ಕೊಡ್ತೇನಿ....ಸುರಿಯಲೇ ಮಳೆ, ಸುರಿಯಲೇ ಮಳೆ. ಎಂದು ಪರಸ್ಪರ ಬಗಾಟ ಬಗರಿ ಆಡುತ್ತಾರೆ. ಹಿರಿಯರು, ಕಿರಿಯರು ಅವರ ಸಂಭ್ರಮ ನೋಡಿ ಮನತುಂಬಿ ನಗುತ್ತಾರೆ. ಮಳೆ ಜೋರಾಗಿ ಬಂತು ಅಂದ್ರೆ ದೇವರು ನಮ್ಮ ಹರಕೆಗೆ ಮೆಚ್ಚಿ ಮಳೆ ಕೊಟ್ಟ ಎಂದು ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಅಷ್ಟಾದರೂ ಮಳೆ ಬಾರದಿದ್ದರೆ ಯಾಕೋ ದೇವರು ನಮ್ಮ ಮೇಲೆ ಕಣ್ಣು ತೆರೆಯವಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಹೀಗೆ ಗ್ರಾಮೀಣ ಭಾರತದಲ್ಲಿ ‘ಕಷ್ಟ ಹೋಗಲಾಡಿಸು ದೇವನೆ’ ಎಂದು ಬೇಡಿಕೊಳ್ಳಲು ಕೂಡಾ ಸಂಭ್ರಮದ ಸಂಪ್ರದಾಯ.
ಇನ್ನು ಕೆಲವು ಕಡೆ ಒಂದೇ ವಾರಿಗೆಯ ೮ರಿಂದ ೧೦ ವರ್ಷ ವಯಸ್ಸಿನ ಸುಮಾರು ೧೦ರಿಂದ೧೫ ಬಾಲಕರನ್ನು ಸೇರಿಸಿ ಅವರು ಹುಟ್ಟಿದಾಗಿನ ಸೂಟ್ ಧರಿಸಿಕೊಂಡೆ(ಬೆತ್ತಲೆ) ತಲೆ ಮೇಲೆ ನೀರಿನ ಕೊಡ ಹೊತ್ತು ಮಳೆ ರಾಯನ ಆಹ್ವಾನಿಸುವ ಹಾಡು ಹಾಡುತ್ತ ಗ್ರಾಮ ಸುತ್ತುತ್ತಾರೆ. ಕೊನೆಗೆ ಅವರೆಲ್ಲ ಗ್ರಾಮದ ಪ್ರಮುಖ ದೇವರ ಗುಡಿ ಮುಂದೆ ನಿಂತು ತಲೆ ಮೇಲೆ ಹೊತ್ತ ಕೊಡದ ನೀರನ್ನು ಗ್ರಾಮದ ದೇವರ ಗುಡಿ ಮುಂದೆ ಸುರಿದು ದೇವರೇ ಮಳೆ ತಾರಪ್ಪ ಎಂದು ಬೇಡಿಕೊಳ್ಳುತ್ತಾರೆ. ಹೀಗೆ ಒಂದೊಂದು ಊರಲ್ಲಿ ಒಂದೊಂದು ಸಂಪ್ರದಾಯ.
ಇಂತಹ ಸಂಪ್ರದಾಯಗಳೊಂದಿಗೆ ಕತ್ತೆ ಮೆರವಣಿಗೆ ಮಾಡುವುದು ಒಂದು. ಹೀಗೆ ಹಲವಾರು ಸಂಪ್ರದಾಯ ಇವೆ. ಸಂಪ್ರದಾಯಕ್ಕೆ ಒಂದಿಷ್ಟು ಜಾನಪದ ಹಾಡುಗಳು. ಸಂಸ್ಕೃತಿ ಮತ್ತು ಸಾಹಿತ್ಯವನ್ನು ಸಂಪ್ರದಾಯ ಗೊಳಿಸಿದ ಗ್ರಾಮೀಣ ಭಾರತದ ಜನಪದ ಇಂದು ಕ್ರಮೇಣ ನಾಗರಿಕತೆಯ ಹೆಸರಿನಲ್ಲಿ ಕರಗುತ್ತಿದೆ.
ಜಾನಪದ ಸಾಹಿತ್ಯ, ಸಂಪ್ರದಾಯಗಳು ಇಂದು ಸಿನಿಮಾದಲ್ಲಿ ನೋಡಿ ಆನಂದಿಸಬೇಕಾಗಿದೆ. ಆದರೆ ನಮ್ಮ ಗ್ರಾಮೀಣ ಜನತೆ ಕ್ರಮೇಣ ಇಂತಹ ಶ್ರೀಮಂತ ಸಂಪ್ರದಾಯಗಳನ್ನು ಮೂಢ ನಂಬಿಕೆಗಳು ಎಂದು ಕಡೆಗಣಿಸುತ್ತಿದ್ದಾರೆ. ಆದರೆ ಮೂಢ ನಂಬಿಕೆ ಉಳಿಸಿಕೊಳ್ಳಬೇಕು ಎಂದು ನಾನು ಇಲ್ಲಿ ಪ್ರತಿಪಾದಿಸುತ್ತಿಲ್ಲ. ಪ್ರಾಣ ಬಲಿ ಕೊಟ್ಟು ಮಳೆ ಆಹ್ವಾನಿಸುವ, ನಾಗರಿಕ ಜಗತ್ತು ತಲೆ ತಗ್ಗಿಸುವಂತ ಮೂಢನಂಬಿಕೆಗಳನ್ನು ಬೇರು ಸಮೇತ ಕಿತ್ತಹಾಕಬೇಕು. ಆದರೆ ಗ್ರಾಮ ಭಾರತ ಜನಪದ ಬದುಕು ಹಸನಾಗಿಸಲು, ಒಗ್ಗಟ್ಟಿನಿಂದ ಇರಲು ಗ್ರಾಮೀಣ ಸಂಪ್ರದಾಯಗಳು ಇರಬೇಕು.

ಲೇಖನವು ಕನ್ನಡಪ್ರಭದಲ್ಲಿ ಪ್ರಕಟವಾಗಿದೆ.