Saturday, January 12, 2008

ಮೈಲಿಗೆಯಲ್ಲಿ ಮಮತೆ ಜಿನುಗಿದಾಗ....

ಗೋವಿಂದ ಮಡಿವಾಳರ

ನಾನೊಂದು ಮರವಾಗಿದ್ದರೆ
ಹಕ್ಕಿ ಗೂಡು ಕಟ್ಟುವ ಮುನ್ನ
ಕೇಳುತ್ತಿರಲಿಲ್ಲ ನೀನು ಯಾವ ಕುಲ
ಬಿಸಿಲು ನನ್ನ ಅಪ್ಪಿಕೊಂಡಾಗ
ನೆರಳಿಗಾಗುತ್ತಿರಲಿಲ್ಲ ಮೈಲಿಗೆ....
ಇದು ಮಾಡ್ನಾಕೂಡು ಚಿನ್ನಸ್ವಾಮಿ ಅವರ ಕವಿತೆಯೊಂದರ ಮೊದಲ ಎರಡು ಪ್ಯಾರಾ. ಈ ಕವಿತೆ ಓದಿದಾಗ ನನಗೆ ನನ್ನ ಕಾಲೇಜು ದಿನಗಳಲ್ಲಿ ಪರಿಚಯವಾದ ಒಂದು ಕುಟುಂಬದ ನೆನಪಾಯಿತು.
ಅದೊಂದು ವೈಷ್ಣವ ಸಂಪ್ರದಾಯ ಮನೆ. ಆ ಮನೆಯಲ್ಲಿ ಸುಮಾರು ೬೦ರ ಆಸುಪಾಸಿನ ವಯಸ್ಸಿನ ಅಜ್ಜಿ. ಸದಾ ಸೀರೆ ಉಟ್ಟು ಕಚ್ಚೆ ಹಾಕಿರುತ್ತಿದ್ದರು. ವೈಷ್ಣವ ಸಂಪ್ರದಾಯ ಅಂದರೆ ಕೇಳಬೇಕೆ.ಪೂಜೆ, ವೃತ ಎಲ್ಲವೂ ನಿಯಮಿತವಾಗಿ ನಡೆಯಲೇ ಬೇಕು. ಇಂತಹ ಮಹಿಳೆಯ ಮಗನೊಬ್ಬ ಕಾಲೇಜು ದಿನಗಳಲ್ಲಿ ನನಗೆ ಗ್ರಂಥಾಲಯದಲ್ಲಿ ಪರಿಚಯವಾದ. ಆತನ ಪರಿಚಯ, ಸ್ನೇಹ ಮುಂದೆ ಆತ್ಮೀಯತೆಗೆ ತಿರುಗಿತು. ಅವರು ಮನೆಗೆ ಆಗಾಗ ಹೋಗಿ ಬರುತ್ತಿದ್ದೆ. ಆಗ ಅವರ ತಾಯಿಯ ಪರಿಚಯವೂ ಆಯಿತು.
ದೂರದ ಹಳ್ಳಿಯಿಂದ ಶಿಕ್ಷಣಕ್ಕೆಂದೇ ನಾನು ಧಾರವಾಡದಂತಹ ನಗರಕ್ಕೆ ಬಂದವನು. ಬಾಡಿಗೆ ರೂಮಿನಲ್ಲಿದ್ದು ಸ್ವತಃ ಅಡಿಗೆ ಮಾಡಿಕೊಂಡು ಊಟ ಮಾಡಿ ಶಿಕ್ಷಣ ಪಡೆಯುತ್ತಿದ್ದೆ. ಇದು ಅವರಿಗೆ ಗೊತ್ತಿತ್ತು. ಹೀಗಾಗಿ ಅವರು ಹಬ್ಬದ ದಿನಗಳಲ್ಲಿ ಊಟಕ್ಕೆ ಹೇಳುತ್ತಿದ್ದರು. ಒತ್ತಾಯದ ಮೇರೆಗೆ ಊಟಕ್ಕೆ ಹೋಗುತ್ತಿದ್ದೆ. ಆ ತಾಯಿ ತೀರಾ ಮಡಿವಂತರು. ಊಟಕ್ಕೆ ಕೊಡುವಾಗ ಊಟದ ತಾಟನ್ನು ದೂರದಿಂದಲೇ ನನ್ನತ್ತ ನೂಕುತ್ತಿದ್ದರು. ಏನಾದರು ಪ್ರಸಾದ ಕೊಡುವದಿದ್ದರೆ ನನ್ನ ಕೈಗೆ ತಾಗಿದ ಗಾಳಿ ಕೂಡಾ ಅವರಿಗೆ ಸೋಂಕಬಾರದು ಎಂಬ ರೀತಿಯಲ್ಲಿ ಕೈ ಎತ್ತರಿಸಿ ಹಾಕುತ್ತಿದ್ದರು. ನಾನು ಕೂಡಾ ಸಂಕೋಚವಿಲ್ಲದೇ ಕೈ ಒಡ್ಡಿ ಸ್ವೀಕರಿಸುತ್ತಿದ್ದೆ. ಅವರು ಹಾಗೆ ಹಾಕುವಾಗಲೆಲ್ಲ ನನಗೆ ಒಳಗೊಳಗೆ ನಗು, ಕೋಪ ಒಟ್ಟೊಟ್ಟಿಗೆ ಬರುತ್ತಿತ್ತು. ಆದರೂ ನಾನು ಆ ಬಗ್ಗೆ ಪ್ರತಿಭಟಿಸಲಿಲ್ಲ. ಯಾಕಂತ ನನಗೆ ಇಂದಿಗೂ ಜಿಜ್ಞಾಸೆ.
ಹೀಗೆ ದಿನಗಳು ಉರುಳಿದಾಗ ನಾನು ಅವರ ಮಗನ ಜೊತೆ ಪ್ರತಿ ಭಾನುವಾರ ಮನೆಗೆ ಹೋಗದಿದ್ದರೆ,ಯಾಕೆ ಆ ಹುಡುಗ ಇವತ್ತು ಮನೆಗೆ ಬಂದಿಲ್ಲ?, ನಿನಗೆ ಭೇಟಿ ಆಗಿಲ್ಲೇನು? ಎಂದು ಪ್ರಶ್ನಿಸುತ್ತಿದ್ದರಂತೆ.
ಭಾನುವಾರದ ಮರುದಿನ ಗ್ರಂಥಾಲಯದಲ್ಲಿ ಸಿಗುತ್ತಿದ್ದ ಸ್ನೇಹಿತ, ಏ ಮಹಾರಾಯ ಮನೆಯಾಗ ಅಮ್ಮಾ ಕೇಳುತ್ತಿದ್ದಳು. ನೀನು ಭಾನುವಾರ ಮನೆಗೆ ಬಾರದಿದ್ದರೆ ಯಾಕ ಬಂದಿಲ್ಲ ಅಂತಾ. ಬಂದು ಹೋಗು ಎಂದು ಹೇಳುತ್ತಿದ್ದರು. ಮರು ದಿನ ಮನೆಗೆ ಹೋದರೆ, ಏನೋ ಮಹಾಶಯ ನೀನು ಭಾನುವಾರ ಮನೆಗೆ ಬಾರದಷ್ಟು ಕೆಲಸ ಒಟ್ಟಿತ್ತೇನು? ಮಬ್ಬ, ಹಂಗ ತಪ್ಪಿಸಬಾರದು ಎಂದು ತಾಕೀತು ಮಾಡುತ್ತಿದ್ದರು. ಕುಂತ್ಗೋ ಎಂದು ಹೇಳಿ ಮನೆಯಲ್ಲಿ ಮಾಡಿಟ್ಟಿದ್ದ ಬೇಸೆನ್ ಉಂಡಿ ತಂದು ಕೈ ಮೇಲೆತ್ತಿ ನನ್ನ ಕೈಗೆ ಹಾಕುತ್ತಿದ್ದರು. ಇಲ್ಲವೇ ಒಂದು ಚಿಕ್ಕದಾದ ಪ್ಲೇಟಿನಲ್ಲಿ ಇಟ್ಟು ದೂರದಲ್ಲೇ ಕುಳಿತು ಪ್ಲೇಟನ್ನು ನನ್ನತ್ತ ನೂಕುತ್ತಿದ್ದರು. ಆಗ ನಾನು ಖುಷಿಯಿಂದಲೇ ತೆಗೆದುಕೊಂಡು ತಿನ್ನುತ್ತಿದ್ದೆ. ಮನೆಗೆ ಹೊರಟು ನಿಂತಾಗ, ಆಗಾಗ ಬರ್ತಾ ಇರು ಎಂದು ಹೇಳುತ್ತಿದ್ದರು. ಆಗ... ನನಗೆ ಒಂದು ರೀತಿ ನನ್ನ ಪಾಲಕರು, ನಾನು ನನ್ನೂರಿನಿಂದ ಧಾರವಾಡಕ್ಕೆ ಹೊರಟು ನಿಂತಾಗ ಹೇಳುತ್ತಿದ್ದದ್ದು ನೆನಪಾಗುತ್ತಿತ್ತು. ಹೀಗೆ ಅವರಲ್ಲಿ ನನ್ನ ಪಾಲಕರನ್ನು ಕಾಣಲಾರಂಭಿಸಿದೆ. ಅದಕ್ಕಾಗಿಯೋ ಏನೋ. ನನ್ನ ಕೈ ಗಾಳಿ ತಾಗಿದರೂ ಮೈಲಿಗೆ ಆಗುತ್ತದೆ ಎಂದು ಎಚ್ಚರ ವಹಿಸಿಕೊಂಡರೂ ನನಗೆ ಅದು ಅವಮಾನ ಅನ್ನಿಸಲೇ ಇಲ್ಲ. ಅಲ್ಲಿ ಜಾತಿಗಿಂತ ಮಮತೆ ಪ್ರಬಲವಾಯಿತೋ ಏನೋ ಎಂದು ಅನಿಸುತ್ತದೆ. ನನ್ನ ಬಂಡಾಯದ ಮನಸ್ಸು ತಣ್ಣಗೆ ಇರುತ್ತಿತ್ತು. ಅದಕ್ಕೆ ಅಂತಾ ಕಾಣಿಸುತ್ತದೆ ಮಮತೆ ಮುಂದೆ ಜಾತಿ ಫೇಲು ಅಂತಾ.
ಒಂದು ದಿನ ಹೀಗೆ ಕುಳಿತಿದ್ದಾಗ, ಆ ಗೆಳೆಯ ನನ್ನ ತಾಯಿ ನಿನಗೆ ಊಟಕ್ಕೆ ನೀಡುವ ರೀತಿ ಬೇಸರ ತರುತ್ತಿರಬೇಕು ಅಲ್ವ. ಖಂಡಿತ ನಿನಗೆ ಆಗೇ ಆಗುತ್ತದೆ. ನನಗೆ ಗೊತ್ತು. ಆದರೂ ನೀನು ಲಕ್ಕಿ ಕಣೋ ಎಂದು ಹೇಳಿ ದೀರ್ಘ ನಿಟ್ಟಿಸುರಿ ಬಿಟ್ಟ..... ನೀನು ಎಂದಾದರು ಗಮನಿಸಿಯಾ ನನ್ನ ತಾಯಿ ನನ್ನ ಪಕ್ಕದಲ್ಲಿ ಕುಳಿತ ಮಾತನಾಡುವುದು, ಅಥವಾ ನಾನು ಅವಳ ಬಳಿ ನಿಂತು ಮಾತನಾಡುವುದು. ನಾನು ಎಲ್ಲರೊಂದಿಗೆ ಬೆರೆತು ಒಡಾಡುವುದರಿಂದ ನನ್ನನ್ನು ನನ್ನ ತಾಯಿ ತನ್ನ ಹತ್ತಿರ ಬರಿಸಿಕೊಳ್ಳುವುದಿಲ್ಲ. ನನ್ನ ಬಟ್ಟೆ ಕೂಡಾ ತೊಳೆಯುವುದಿಲ್ಲ. ನನ್ನ ವೈನಿ ಬಂದ ಮೇಲೆ ಅವರೇ ನನಗೆ ಊಟಕ್ಕೆ ಹಾಕುತ್ತಾರೆ.ಬಟ್ಟೆ ತೊಳೆದುಕೊಡುತ್ತಾರೆ. ಹತ್ತಿರ ಹೋದರೆ ನಮ್ಮ ತಾಯಿ ಸರದ ನಿಲ್ಲೋ ಆ ಕಡೆ ಅಂತಾ ಹೇಳ್ತಾರ. ಅಷ್ಟೊಂದು ಕಟ್ಟುನಿಟ್ಟಿನ ವೃತ ಅವರದು. ಅದಕ್ಕೆ ಬೇಜಾರ ಮಾಡಿಕೋ ಬೇಡ ಅಂತಾ ಸಮಾಧಾನ ಪಡಿಸಿದ.
ಹೋಗಲಿ ಬಿಡು. ಅಮ್ಮನ ಸ್ಥಾನದಲ್ಲಿ ಅತ್ತಿಗೆ ಇದ್ದಾಳಲ್ಲ ಎಂದು ಸಮಾಧಾನ ಮಾಡಿದೆ.
ಹಾಗಲ್ಲೋ, ನೀನು ವಾರದಲ್ಲಿ ಒಂದು ದಿನ ಬಾರದಿದ್ದರೆ ಚಡಪಡಿಸುತ್ತಾರೆ. ಬಂದಕೂಡಲೇ ಉಪಚಾರ ಮಾಡುತ್ತಾರೆ. ಓದು ಅಂತಾರ. ನನ್ನ ಬಗ್ಗೆ ಕಾಳಜಿನ ಮಾಡೋದಿಲ್ಲ. ಆದರೂ ಅವರು ನನ್ನ ತಾಯಿ. ಅವರು ಇನ್ನೊಬ್ಬರನ್ನು ಗೌರವಿಸುವ ರೀತಿ ಐತಲ್ಲ ಅದು ನನಗೆ ಅವರ ಬಗ್ಗೆ ಹೆಮ್ಮೆ ಅನಿಸುತ್ತದೆ ಎಂದ.
ಅಷ್ಟೆಲ್ಲ ಮಾತಾಡಿದ ನಂತರ ನನಗೆ ಏನೂ ಹೆಚ್ಚು ಮಾತಾಡಲು ಮನಸ್ಸಾಗಲಿಲ್ಲ. ಸುಮ್ಮನೆ ಆತನ ಕೈಯನ್ನು ನನ್ನ ಕೈಗೆ ತೆಗೆದುಕೊಂಡು ಅದುಮಿ ಕೈ ತಟ್ಟಿ ತರಗತಿ ಕಡೆಗೆ ಹೋದೆ. ನಂತರ ನನ್ನ ರೂಮಿಗೆ ಬಂದ ಮೇಲೆ ಅವನ ಮಾತುಗಳೇ ಮನಸ್ಸಿನಲ್ಲಿ ಗಿರಕಿ ಹೊಡೆಯಲಾರಂಭಿಸಿದವು.
ಅವರಿಗೆ ನಾನು ಮಗನಲ್ಲಿ, ಬಳಗದವನಲ್ಲ. ಆದರೂ ಅವರು ಅಷ್ಟೊಂದು ಪ್ರೀತಿ ತೋರಿಸುತ್ತಿದ್ದಾರಲ್ಲ ಅದು ಮುಖ್ಯ ಅನಿಸಿತು.
ಪ್ರತಿಯೊಬ್ಬನಿಗೆ ಆತ ನಂಬಿದ, ವಿಶ್ವಾಸದ ವಿಚಾರಗಳನ್ನು ಇದ್ದಕ್ಕಿದ್ದಂತೆ ಬಿಟ್ಟುಬಿಡು, ನಮ್ಹಂಗೆ ಇರು ಎಂದು ಹೇಳುವುದು ಸುಲಭ. ಆದರೆ ಅವರಿಗೆ ಅದು ಅಷ್ಟು ಸುಲಭ ಅಲ್ಲ. ಆದರೂ ನಾವು ಪರಸ್ಪರ ಆಸ್ಪೃಶ್ಯತೆ, ದ್ವೇಷದ ಗಡಿ ದಾಟಿದಾಗಲೇ ಪ್ರೀತಿಯ ಅನುಭವ ಆಗ್ತದ.
ಪ್ರೀತಿ, ವಿಶ್ವಾಸ, ಮಮತೆ ಮುಂದೆ ಜಾತಿ ವ್ಯವಸ್ಥೆ ಗೌಣ ಅನ್ನುವುದನ್ನು ಅವರು ತಣ್ಣಗೆ ನನಗೆ ಪಾಠ ಮಾಡಿದ ಮೇಸ್ಟ್ರು ಅನಿಸುತ್ತದೆ. ಅಂತಹವರ ಸಾಮಿಪ್ಯ ನನ್ನನ್ನು ಜಾತಿ ಸೋಂಕಿನಿಂದ ದೂರ ಇಟ್ಟಿದೆ ಅನಿಸುತ್ತದೆ.
ಅವರು ಜಾತಿ ಶ್ರೇಣಿಕರಣೆಯನ್ನು ಧಿಕ್ಕರಿಸಿ ನನಗೆ ಮಮತೆ ತೋರಿಸಿದ್ದರಲ್ಲ ಅದು ನಿಜವಾದ ಬಂಡಾಯ ಅಂತಾ ನನಗೆ ಇಂದಿಗೂ ಅನಿಸುತ್ತದೆ. ಅವರ ಮುಂದೆ ನಾನು ಗೌರವಿಸುವ ಸಾಮಾಜವಾದ ಏನೂ ಅಲ್ಲ. ಅಂತಹವರ ಇರಬೇಕು ನಮ್ಮ ಮಧ್ಯೆ ಅನಿಸುತ್ತದೆ. ಇಂದು ಅವರು ನಮ್ಮ ಮಧ್ಯೆ ಇಲ್ಲದಿದ್ದರೂ, ಜಾತಿ ಪ್ರಶ್ನೆ ಬಂದಾಗಲೆಲ್ಲ ಅವರು ನನ್ನ ನೆತ್ತೆ ಸವರಿದಂತೆ ಆಗುತ್ತದೆ.

No comments: