Tuesday, May 27, 2008

ಊರಲ್ಲ ಬಿಡಿ ಇದು ಸಿಟಿ

  • ಗೋವಿಂದ ಮಡಿವಾಳರ

ಊರಲ್ಲ ಬಿಡಿ ಇದು ಸಿಟಿ
ಕಚೇರಿ ಕೆಲ್ಸಕ್ಕಂತ ಬೆಂಗ್ಳೂರಿಗೆ ಹೋಗಿದ್ದ ನಮ್ಮ ಬಸವನಿಗೆ ಅಲ್ಲಿ ಓಡಾಡುವ ಗಾಡಿ ನೋಡಿ ಬೆಂಗ್ಳೂರಾಗ ಜನರು ಹೆಚ್ಚೋ, ವಾಹನ ಹೆಚ್ಚೋ ಎಂಬ ದಿಗಿಲಾಯಿತು. ತಾನು ಬಸ್‌ನ್ಯಾಗ ಹೋಗೋದೋ, ರಸ್ತೆದ್ಯಾಗ ಹೋಗೋದು ಅಂತಾ ಚಿಂತೆಗೀಡಾದ. ಅಂತೂ ಇಂತೂ ದೊಡ್ಡ ಸಮಸ್ಯೆ ನೀಗಿಸ್ಕೊಂಡವನ ಹಾಂಗ ರಿಕ್ಷಾ ಹಿಡಿದು ಕಚೇರಿಗೆ ಹೋದ. ಕೆಲ್ಸ ಮುಗ್ಸಿಕೊಂಡು ಅಲ್ಲಿಂದ ಪರಿಚಯದವರ ಮನೆಗೆ ಹೋಗಬೇಕು ಅಂತಾ ವಿಳಾಸ ಕೇಳಿಕೊಂಡು ಬಸ್ ನಿಲ್ದಾಣಕ್ಕೆ ಹೋದ. ಒಂದು ಪ್ಲಾಟ್ ಫಾರ್ಮ್‌ನಿಂದ ಇನ್ನೊಂದು ಪ್ಲಾಟ್‌ಫಾರ್ಮ್‌ಗೆ ಅಲೆದೆ ಅಂತು ಹೋಗಬೇಕಾಗಿದ್ದ ಸುಂಕದ ಕಟ್ಟೆ ಬಸ್ ಹಿಡಿದ.
ಬಸ್ ತುಂಬೆಲ್ಲ ಮಂದಿ. ಬಸ್ ಹೊರಟಿತು. ಸುಂಕದ ಕಟ್ಟೆ ಅಂದ ಕೂಡಲೇ ಕವಿ ಬೇಂದ್ರೆ ಬರೆದ... ಟೊಂಕದ ಮೇಲೆ ಕೈ ಇಟ್ಕೊಂಡು ಬಿಂಕದಾಕಿ ಇವಳಾರು ಇಕಿ,
ಒಂಟಿ ತೋಳು ತೋರುಸ್ತಾಳ ಸುಂಕದ ಕಟ್ಯಾಂವಗ,
ಇವಳು ಸುಂಕದ ಕಟ್ಯಾಂವಗ.
ಎಣ್ಣಾ ಮಾಂವ ಅಂತ ರಮಿಸಿ ಬಣ್ಣದ ಮಾತು ಆಡುವಾಕಿ,
ಇವಳಿ ಬಣ್ಣದ ಮಾತು ಆಡುವಾಕಿ.
ಮೆಂತೆ ಸಿವುಡು ಕಟ್ಟಿಕೊಂಡು ಸಂತಿ ಪ್ಯಾಟಿ ಮಾಡುವಾಕಿ ಇವಳು ಸಣ್ಣನ ನಡದಾಕಿ ಇವಳು ಸಣ್ಣನ ನಡದಾಕಿ,
ಎಂಬ ಹಾಡು ನೆನಪಾಗಿ ಗದುಗಿನ ಪಕ್ಕದ ಬಿಂಕದ ಕಟ್ಟಿ ಗ್ರಾಮ ಈ ಬೆಂಗಳೂರಿನ ಸುಂಕದಕಟ್ಟಿ ಒಂದೇ ಅನಿಸಿ ಹಾಡಿನ ಗುಂಗಿನಲ್ಲಿ ಪಕ್ಕದಲ್ಲೇ ನಿಂತಿದ್ದ ಯುವಕನೊಬ್ಬನನ್ನು ಸುಂಕದ ಕಟ್ಟಿ ಊರು ಇನ್ನು ಎಷ್ಟು ದೂರ ಐತ್ರಿ ಅಂತಾ ಬಸವ ಕೇಳಿದ.
ಆ ಯುವಕ ಬಸವನನ್ನು ಅಡಿಯಿಂದ ಮುಡಿತನಕ ನೋಡಿ ‘ಏ, ಊರಂತೆ ಊರು. ಸುಂಕದ ಕಟ್ಟಿ ಊರಲ್ಲ ಸಿಟಿ. ಬೆಂಗಳೂರು ಸಿಟಿ. ಅಂ..’ ಅಂದು ದುರುಗುಟ್ಟಿ ನೋಡಿದ. ಮಾತಿನ ತಪ್ಪಿನ ಅರಿವಾಗಿ, ಅಲ್ಲಪಾ ಸುಂಕದ ಕಟ್ಟಿ ಸ್ಟಾಪ್ ಇನ್ನು ಎಷ್ಟು ದೂರು ಅದ ಅಂತಾ ಕೇಳುವ ಬದಲು ಊರು ಅಂತಾ ಕೇಳಿದೆ ಎಂದು ಸಾಬೂಬು ಹೇಳಿದ. ಆದರೆ ಆ ಯುವಕ ಯಾವುದಕ್ಕೂ ಪ್ರತಿಕ್ರಿಯೇ ತೋರದೆ ಸ್ವಲ್ಪು ಹಿಂದೆ ಸರಿದು ನಿಂತ. ಆಗ ಕಂಡಕ್ಟರ್, ‘ಏಜಮಾನ್ರೆ ಇನ್ನು ಎರಡು ಸ್ಟಾಪ್ ಆದ ಮೇಲೆ ಸುಂಕದ ಕಟ್ಟೆ ಬರತೈತಿ ಏಳ್ರಿ’ ಅಂದ.
ಕಂಡಕ್ಟರ್‌ನ ತಲ್ಯಾಗಿನ ಎಲ್ಲ ಕೂಲ್ದಾ ಬೆಳ್ಳಗ ಅಗ್ಯಾಂವ. ಇನ್ನೊಂದು ವರ್ಷದಾಗೋ, ಎರಡ ವರ್ಷದಾಗ ರಿಟಾಯರ್‍ಡ್ ಆಗಾಂವ ಇದ್ಹಾಂಗ ಅದಾನ, ಅದರೂ ೪೦ರ ಆಸುಪಾಸಿನ ಬಸವನಿಗೆ ಅಂವಾ ಯಜಮಾನ್ರ ಅಂದಾಗ ಬಸವ ಗಲಿಬಿಲಿಗೊಂಡ. ಅಂವಾ ನನಗಿಂತ ಸಣ್ಣಾಂವ ಅದಾನೇನು ಅಂತ ಬಸವ ತನ್ನಷ್ಟಕ್ಕ ತಾನ ಅಂದ್ಕೊಂಡ. ಅಥವಾ ನಾನ ಮುದುಕರ ಹಂಗ ಕಾಣ್ತೇನಿ ಏನು? ಎಂದು ಚಿಂತ ಮಾಡುತ್ತಿರುವಾಗ ಮತ್ತೆ ಕಂಡಕ್ಚರ್ ‘ಯಜಮಾನ್ರ ಸುಂಕದ ಕಟ್ಟೆ ಬಂತು. ಇಳಿರಿ’ ಎಂದು ಎಚ್ಚರಿಸಿದ. ಬಸ್ ಇಳಿದ ಸಂಬಂಧಿಕರ ಮನೆಗೆ ಹೋಗಿ ಮುಖ ತೊಳೆದುಕೊಂಡು ಒರೆಸಿಕೊಳ್ಳುವ ನೆಪದಲ್ಲಿ ಕನ್ನಡಿ ಮುಂದೆ ಹೋಗಿ ನಿಂತ್ಕೊಂಡು ನೋಡ್ಕೊಂಡ. ಮುಖ ಹೊಳ್ಳಿ ಹೊಳ್ಳಿಸಿ ನೋಡ್ಕೊಂಡ. ಛೇ ಹಂಗೇನು ಇಲ್ಲ. ಅಂವಾ ಹಂಗ್ಯಾಕ ಅಂದಾ... ಎಂದು ಚಿಂತಿಸುತ್ತಿರುವಾಗ ಹಿಂದೆ ಏರೋ ನಕ್ಕಂಗ ಆಯಿತು. ಹೊಳ್ಳಿ ನೋಡಿದ್ರ ಬಸವನ ಅಳಿಯ ನಿಂತಿದ್ದ. ಯಾಕ್ರಿ ಮಾಮಾ ಕನ್ನಡಿಯಾಗ ಮುಖ ಅಷ್ಟಾಕ ನೋಡಿಕೊಳ್ಳಾಕಹತ್ತೀರಿ? ಮತ್ತೊಮ್ಮೆ ಕನ್ಯಾ ನೋಡಾಕ ಹೋಗಾಂವ್ರು ಇದ್ದೀರೇನು? ಅಂತಾ ಕೇಳಿದ.
ಏ ಹೊಗ್ಗಾ ನೀನ, ಎಲ್ಲಿ ಕನ್ಯಾ, ಬಸ್ಸಿನಾಗ ಬರಾಕ ಹತ್ತಿದಾಗ ಕಂಡಕ್ಟರ್ ಇದ್ದಾನಲ್ಲ ನನಗೆ ಯಜಮಾನ್ರ ಅಂದ. ಅದಕ್ಕ ಮುದುಕೇನರ ಆಗೇನೇನ ಅಂತಾ ನೋಡ್ಕೊಂಡೆ ಅಂದಾಗ ಅಂವಾ ನಕ್ಕು, ಹಂಗಾರಿ ಮಾಮಾ ಇಲ್ಲಿ. ಎಲ್ಲರೂ ತಾವು ಇನ್ನು ಚಿರಯವ್ವನರ, ಉಳಿದವರು ಮುದುಕ್ರು ಅನ್ನೋತರಹ ಮಾತಾಡ್ತಾರ. ಅದನ್ಯಾಕ ಮನಸ್ಸಿಗೆ ಹಚ್ಚಿಕೊಂತಿರಿ ಬಿಡ್ರಿ ಎಂದು ಸಮಾಧಾನ ಮಾಡಿದ.
ಬಸವನಿಗೆ ಮನಸು ಸ್ವಲ್ಪ ಹಳಾರ ಅನಿಸ್ತು. ಅಸ್ಟೊತ್ತಿಗೆ ಸಂಬಂಧಿಕರ ಮನೆಯವರು ಪಾನಕಾ ಕೊಟ್ಟರು. ಕುಡಿದು, ಅವರನ್ನೆಲ್ಲಿ ಮಾತಾಡಿಸಿಕೊಂಡು ಮತ್ತೆ ತನ್ನ ಊರಿಗೆ ಹೋಗಾಕ ಬಸ್ ನಿಲ್ದಾಣಕ್ಕೆ ಬಂದ. ಆಗಲೇ ಸಂಜೆ ಆಗಿತ್ತು. ಮುಂಜಾನೆ ಎಂತ ಚಂದರ ಕಾಣ್ತಿದ್ದ ಬೆಂಗಳೂರ್ ಆನಂದರಾವ್ ಸರ್ಕಲ್‌ನಾಗಿನ ಫುಟ್ ಪಾತ್‌ಗಳು ಸಂಜೆ ಹೊತ್ತಿಗೆ ಕೈಗಾಡಿಗಳಿಂದ ಸಿಂಗರಿಸಿಕೊಂಡಿದ್ದವು. ಕರಿದ ಪದಾರ್ಥದ ವಾಸನಿ, ಮೀನಗಾರ ಮೀನಕ್ಕೆ ಗಾಳಹಾಕಿ ಎಳೆದ್ಹಂಗ ಎಳೆಯಾಕ ಹತ್ತಿತು. ಹೋಗಿ ನೋಡ್ದಾ. ಚಪಾತಿ ಅಡ್ಡಗಲ ಪುರೆ, ಮಾಡಿ ಕೊಡ್ತಿದ್ರು. ಜನಾನು ಹಂಗ ಅಲ್ಲೇ ಫುಟ್ ಪಾತ್‌ನ್ಯಾಗ ನಿಂತು ಗಬಾಗಬಾ ಅಂತಾ ತಿಂತಿದ್ರು. ರಸ್ತೆದಾಗ ಬಸ್, ಲಾರಿ, ಕಾರು ಹೀಂಗ ನಾನಾ ವಾಹನ ದೂಳದ ಒಕಳಿಯಾಡತಿದ್ದವು. ಅದರ ದರಕಾರನ ಇವರಿಗೆ ಇದ್ಹಾಂಗ ಕಾಣಲಿಲ್ಲ. ಅಲಾ ಇವನ ನಮ್ಮ ಹಳ್ಯಾಗ ಹೀಂಗ ರಸ್ತೆದಾಗ ನಿಂತು ಊಟಾ ಮಾಡಕ್ಕಿಲ್ಲ ಬಿಡು. ಖರೇ ಐತಿ ಬಿಡು. ಇದು ಸಿಟಿ ಅಲ್ವಾ!. ಹಳ್ಳಿಯಾದ್ರ ಒಂದು ಗುಡಸಲ್ದಾಗಾದ್ರು ಕುಂತು ಊಟ ಮಾಡ್ತಾರ. ಕೊನೆಗೆ ಗಿಡದ ನೆಳ್ಳಾಗರ ಕುಂತು ಊಟಾ ಮಾಡ್ತಾರ ಬಿಡು. ಅಂವಾ ಹೇಳಿದ್ದು ಖರೇ ಐತಿ. ಇದು ಸಿಟಿರಿ ಸಿಟಿ ಅಂತಾ.
ಬೆಂಗಳೂರಿಂದ ಮತ್ತೆ ತಮ್ಮೂರಿಗೆ ಹೊಂಟ ನಿಂತ ಬಸವನಿಗೆ ಬಸ್‌ನಲ್ಲಿ ಪಕ್ಕದ ಸೀಟಿನಾಗ ಒಬ್ಬ ಯುವಕ ಕುಂತಿದ್ದ. ಯಾವ ಊರು? ಏನು ಎಂತು ಹೀಗ ಪರಸ್ಪರ ಇಚಾರಿಸಿಕೊಂಡ ಮೇಲೆ ಬೆಂಗ್ಳೂರಾಗ ಎಂತೆಂತೋದೋ ಊಟ ಕೊಡ್ತಾರ. ಬಾಯಿಗೆ ಬಂದಷ್ಟು ರೇಟು ಹೇಳ್ತಾರ. ಅಷ್ಟನ್ನೂ ಕೊಟ್ಟ ಬರಬೇಕು ಎಂದು ಹೇಳುತ್ತು.... ಮೊನ್ನ ಒಂದು ಮಜಾ ಸಂಗತಿ ಆತು ನೋಡ್ರಿ.
ಏನಪಾ ಅಂದ್ರ.... ಬೆಂಗಳೂರಿನ ಐಟಿ ಕಂಪನಿಯ ಮುಖ್ಯಸ್ಥರೊಬ್ಬರು ಹೊಟೇಲ್ ವೊಂದರಲ್ಲಿ ಹೋಗಿ ‘ನಮ್ಕಿನ್ ಲಸ್ಸೀ’ ಕುಡಿದು ಬಂದು, ತಮ್ಮ ಆಫೀಸಿನ್ಯಾಗ, ಎಲ್ಲರ ಎದುರಿಗೆ ನಾ ಇವತ್ತು ನಮ್ಕಿನ್ ಲಸ್ಸಿ ಕುಡಿದೆ. (I never seen this kind of ‘NAMKIN LASSi’. It is very good and tasty ) ಎಂದು ಬಣ್ಣಿಸಿದ್ದಲ್ಲದೇ ತನ್ನ ಸ್ಠಾಫ್‌ಗೆ ಮರುದಿನ ನಮ್ಕಿನ್ ಲಸ್ಸಿ ಕುಡಿಯಾಕ ಕರಕೊಂಡು ಹೋಟಲ್‌ಗೆ ಹೋದ್ರು. ಎಲ್ಲರೂ ಕುಡಿದ್ರು. ಅದರಾಗ ಹಳ್ಳಿಯಿಂದ ಬಂದ ಯುವಕ ಏ ಇದು ಮಜ್ಜಿಗೆ ಸಾರ್ ಬಿಡ್ರಿ. ಅಂದ. ಸಿ.ಇ.ಓ. ಸಾಹೇಬ್ರ, ವಾಟ್ ಮಜ್ಜಿಗೆ ಸಾರ್, ಇಟ್ಟೀಸ್ ನಮ್ಕಿನ ಲಸ್ಸಿ ಇಸಂಟಿಟ್ (ಮಜ್ಜಿಗೆ ಸಾರ್ ಅಲ್ಲ. ಇದು ನಮ್ಕಿನ್ ಲಸ್ಕಿ ಗೊತ್ತಾತಿಲ್ಲ) ಅಂತಾ ಹೇಳಿದ. ಯಸ್ ಸರ್ ಇಟ್ಟೀಸ್ ನಮ್ಕಿನ್ ಲಸ್ಸಿ. ಇಟ್ಟಿ ಈಸ್ ಸಿಟಿ ಫಾಸ್ಟ್ ಫುಡ್ ಅಂದಾ. ಅದಕ್ಕ ಸಿಇಓ ಖುಷ್ ಆಗಿ. ಯುವರ್ ಗ್ರ್ಯಾಸ್ಪಿಂಗ್ ಫಾವರ್ ಇಸ್ ವೆರಿ ಹೈ ಎಂದ. ಇಬ್ಬರು ಒಟ್ಟೊಟ್ಟಿಗೆ ನಕ್ಕ ಸುಮ್ಮನಾದರು.
ನಗರೀಕರಣಗೊಂಡ ಮಜ್ಜಿಗೆ ಸಾರು ಲಸ್ಸಿಯಾದ ಐಟೆಂಗೆ ಪಟ್ಟಣದಲ್ಲಿ ಪ್ರತಿ ಗ್ಲಾಸ್‌ಗೆ ೨೫ ರುಪಾಯಿ!.ಸಾಹೇಬ್ರ ಕರಕೊಂಡು ಹೋಗ್ಯಾರ ಅಂದ ಮ್ಯಾಲೆ ಫಸ್ಕ್ಲಾಸ್ ಐತಿ, ಥ್ಯಾಂಕ್ಯೂ ಎಂದು ಹೇಳಿ ಎಲ್ಲರೂ ಕುಡಿದ್ರು. ಅಂದ
ಹಳ್ಳಿಯೊಳಗೆ ಮಾಡುವ ‘ಮಜ್ಜಿಗೆ ಸಾರು’ ಈ ನಮ್ಕಿನ್ ಲಸ್ಸಿಗೂ ಏನೂ ಫರಕ ಇದ್ದಿರಲಿಲ್ಲ. ಅಂತಹ ಒಂದು ಗ್ಲಾಸ್ ನಮ್ಕಿನ್ ಲಸ್ಸಿಗೆ ೨೫ ರುಪಾಯಿ!.ಇದೆಲ್ಲ ಹೈಟೆಕ್ ಮಂದಿ ನೋಡ್ರಿ. ಎಲ್ಲ ಹೀಂಗ. ಸಂಬಳ ಜಾಸ್ತಿ, ಬಾಯಿಗೆ ಅಟು ರುಚಿ ಹತ್ತಿದ್ರ ಸಾಕು. ಹೇಳಿದಷ್ಟು ದುಡ್ಡು ಕೊಡ್ತಾರ ನೋಡ್ರಿ.
ಎಷ್ಟೇ ಆಗ್ಲಿರಿ ಸಿಟಿ ಜನ ನೋಡ್ರಿ ಅವ್ರು. ಸಿಟಿ ಅಂದ್ರ ಹೀಂಗ ಅಂತ ಕಾಣ್ತದ ಬಿಡ್ರಿ. ಅದಕ್ಕ ಆ ಯುವಕ ಊರಲ್ಲ ಇದು ಸಿಟಿ ಅಂದದ್ದು ನೋಡ್ರಿ.
ಬಸವನಿಗೆ ಮಜ್ಜಿಗೆ ಸಾರ ಅಂದ ಕೂಡ್ಲೆ ಅವ್ರು ಅಜ್ಜಿ ಬ್ಯಾಸಗಿ ದಿನದಾಗ ಒಗ್ಗರಣಿ ಮಜ್ಜಿಗಿ ಮಾಡಿ, ಕರಿದ ಮೆಣಸಿನಕಾಯಿ ಮಾಡಿ ಊಟಕ್ಕೆ ಹಾಕಿದ್ರು ಅಂದ್ರ ಎರಡು ತುತ್ತು ಊಟ ಜಾಸ್ತಿನ ಮಾಡುತ್ತಿದ್ದದ್ದು ನೆನಪಾಗಿ ಮೆಲ್ಲಕ ಬಾಯಿ ಚಪ್ಪರಿಸಿದ. ಅಷ್ಟೊತ್ತಿಗೆ ಬಸ್ ಮೆಲ್ಲಕ ಹೋಗಾಕ ಹತ್ತಿತ್ತು. ರಸ್ತೆ ಪಕ್ಕದ ಚಹಾದ ಅಂಗಡಿ ಕಡೆಯಿಂದ ನಮ್ಮೂರ ನಮಗ ಪಾಡ. ಯಾತಕ್ಕವ್ವ ಹುಬ್ಬಳ್ಳಿ-ಧಾರವಾಡ ಎಂಬ ಹಾಡು ಕೇಳಿಸಲಾರಂಭಿಸಿತು. ಬಸವ ಗುಣಗುಣಸುತ ನಿದ್ರೆ ಹೋದ.
(ಕನ್ನಡಪ್ರಭ ಮೇ ೨೫ರ ಸಾಪ್ತಾಹಿಕ ಸಂಚಿಕೆಯಲ್ಲಿ ಈ ಲೇಖನ ಪ್ರಕಟವಾಗಿದೆ.)

No comments: