Thursday, December 11, 2008

ಗಾಂಧೀಜಿ ಗಳಿಸಿದ್ದು......

  • ಗೋವಿಂದ ಮಡಿವಾಳರ

ಅವತ್ತು ಒಂದು ದಿನ ಮಧ್ಯೆ ರಾತ್ರಿ ನೀರವತೆಯಲಿ ನಗರದ ಐದು ಮೂರ್ತಿಗಳು ಒಂದು ಕಟ್ಟೆಯ ಮೇಲೆ ಕುಳಿತು ತಮ್ಮ ಸುಖ,ದುಃಖ ಹಂಚಿಕೊಳ್ಳಲಾರಂಭಿಸಿದವು.
ಜ್ಯೋತಿಬಾ ಹೇಳಿದರು,
ಕೊನೆಗೂ ನನ್ನ ಸೀಮಿತಗೊಳಿಸಿದ್ದಾರೆ ಮಾಳಿ ಜಾತಿಗೆ
ಛತ್ರಪತಿ ಶಿವಾಜಿ ಹೇಳಿದರು
ನಾನೋ ಬರೀ ಮರಾಠರವ
ಅಂಬೇಡ್ಕರ್ ಹೇಳಿದರು
ನಾನು ಬರೀ ಬೌದ್ಧರವ
ಹೇಳಿದರು ಟಿಳಕ
ಕರೆಯುತ್ತಾರೆ ನನ್ನನ್ನು ಬರೀ
ಚಿತ್ಪಾವನ ಬ್ರಾಹ್ಮಣನೆಂದು
ಗಾಂಧೀಜಿಗೆ ಮರಕಳಿಸಿತು ದುಃಖ
ಹೇಳಿದರು ಅವರು
ನೀವೆಲ್ಲ ಭಾಗ್ಯವಂತರು
ಒಂದಾದರು ಜಾತಿ ಇದೆ ನಿಮ್ಮ ಹಿಂದೆ
ನಿಮ್ಮನ್ನು ಸಮರ್ಥಿಸಲು
ಏನಿದೆ ನನ್ನ ಹಿಂದೆ?
ಸರ್ಕಾರಿ ಕಚೇರಿಗಳಲ್ಲಿನ ಖಾಲಿ ಗೋಡೆ.
ಇದು ಜ್ಞಾನಪೀಠ ಪ್ರಶಸ್ತಿ ವಿಜೇತ ಮರಾಠಿ ಕವಿ ಕುಸಮಾಗ್ರಜ ಅವರ ‘ಕಮಾಯಿ’(ಗಳಿಸು) ಕವಿತೆಯ ಸಾರ.
ಹೌದು ದೇಶದ ಯಾವುದೇ ಭಾಗದಲ್ಲಿ ಗಾಂಧೀಜಿ ಮೂರ್ತಿ ಭಗ್ನವಾದರೆ ಪ್ರತಿಭಟಿಸುವವರೇ ಇಲ್ಲ. ಅದನ್ನು ಸರಿಪಡಿಸಬೇಕಾದರೆ ಮತ್ತೆ ಬರಬೇಕು ಗಾಂಧಿ ಜಯಂತಿ ಅಥವಾ ಗಾಂಧೀಜಿ ಪುಣ್ಯತಿಥಿ ದಿನ. ಆಗ ಸರಕಾರಿ ಅಧಿಕಾರಿಗಳು ಸರಿಪಡಿಸುತ್ತಾರೆ. ಮತ್ತೆ ಎಲ್ಲರಿಗೂ ಬೇಕು ಪ್ರತಿಭಟಿಸಲು ಗಾಂಧಿ ಪುತ್ಥಳಿಯ ಇರುವ ಸ್ಥಳ. ಅವರ ಫೋಟೋ.
ಈಚೆಗೆ ಡೆನ್ಮಾರ್ಕ್ ದೇಶದ ಪತ್ರಿಕೆಯೊಂದರಲ್ಲಿ ಗಾಂಧೀಜಿ ಒಂದು ಕೈಯಲ್ಲಿ ಬಿಯರ್ ಬಾಟಲಿ ಹಿಡಿದು ಇನ್ನೊಂದು ಕೈಯಲ್ಲಿ ಮಾಂಸದ ಬರ್ಗರ್ ಬೇಯಿಸುತ್ತಿರುವ ಚಿತ್ರವನ್ನು ಪ್ರಕಟಿಸಿತ್ತು (ಈ ಕುರಿತು ಪತ್ರಿಕೆಗಳಲ್ಲಿ ವರದಿಯಾಗಿದೆ.) ಮದ್ಯ, ಮಾಂಸದಿಂದ ದೂರವಿದ್ದ ಗಾಂಧೀಜಿ ಕೈಯಲ್ಲಿ ಅವುಗಳನ್ನು ಕೊಟ್ಟರೆ ಗಾಂಧೀಜಿ ಹೇಗೆ ಕಾಣಬಹುದು ಎಂದು ಕಲಾವಿದ ಅಥವಾ ಪತ್ರಿಕೆಯ ಸಂಪಾದಕರು ನೋಡಲು ಪ್ರಯತ್ನಿಸಿರಬಹುದು. ಆದರೆ ಅಲ್ಲಿ ಕೂಡಾ ಕಲಾವಿದ ಗಾಂಧಿ ಜೊತೆ ಸೋತಿದ್ದಾನೆ ಎಂದೇ ಹೇಳಲು ಬೇಕು. ಚಿತ್ರ ಆಕರ್ಷಕವಾಗಿರಬೇಕು. ಆದರೆ ಅಲ್ಲಿ ಆಕರ್ಷಣೆ ಇಲ್ಲ. ಆಕರ್ಷಣೆ ಇಲ್ಲದ ಚಿತ್ರ ಅದು ಚಿತ್ರವಾಗಲಾರದು ಎಂಬುದು ನನ್ನ ಭಾವನೆ.
ಚಿತ್ರ ಪ್ರಕಟಿಸಿದ ಡೆನ್ಮಾರ್ಕ್‌ನ Morgenavisen jullands-Postenಪತ್ರಿಕೆಯ ಸಂಪಾದಕರಿಗೆ ಡೆನ್ಮಾರ್ಕನಲ್ಲಿ ಇರುವ ಭಾರತದ ರಾಯಭಾರಿ ಕಚೇರಿಯಿಂದ ಪ್ರತಿಭಟನೆ ಪತ್ರ ಬರೆಯಲಾಯಿತು. ಅದಕ್ಕೆ ಪತ್ರಿಕೆಯ ಸಂಪಾದಕ ಉತ್ತರ ಬರೆಯುತ್ತಾರೆ.We have chosen him with Nelson Mandela and the Dalai Lama as some of the new World history most beloved and respected people. yes indeed almost icons. This is a marketing campaign, which has just saluted the three men for their unique struggle for peace and freedom in the world.ಎಂದು ಹೇಳಿದ್ದಲ್ಲದೇ ಕ್ಷಮೆ ಕೋರುತ್ತಾರೆ. ಆದರೆ ಸಾಮಾನ್ಯ ಓದುಗರು ಪತ್ರಿಕೆಯಲ್ಲಿ ಪ್ರಕಟವಾದ ಚಿತ್ರವನ್ನು ತಮಾಷೆಯಾಗಿ ಉಪಯೋಗಿಸುತ್ತಾರೆ ಎಂಬುದು ಪತ್ರಿಕೆಯ ಸಂಪಾದಕರ ಗಮನಕ್ಕೆ ಬರಬೇಕಾಗಿತ್ತು. ಅವರು ಅಷ್ಟು ಹೇಳಿಕೆ ಭಾರತದ ಪ್ರತಿಭಟನೆ ಪತ್ರಕ್ಕೆ ಫುಲ್ ಸ್ಟಾಪ್.
ಗಾಂಧೀಜಿ ಅವರು ಟೀಕೆಗೆ ಒಳಗಾದಷ್ಟು ಜಗತ್ತಿನ ಯಾವುದೇ ನಾಯಕ ಅಥವಾ ವ್ಯಕ್ತಿ ಆಗಿಲ್ಲ ಎಂಬುದು ನನ್ನ ತಿಳಿವಳಿಕೆ. ಗಾಂಧೀಜಿ ಟೀಕಿಸಲು ಅವರ ಮಗ ಹೀರಾಲಾಲ್‌ನ ಬದುಕಿನ ದುಸ್ಥರ ಘಟನೆಗಳನ್ನು ಬರೆದರು. ಬರೆಯುತ್ತ ಗಾಂಧೀಜಿಯಿಂದಾಗಿಯೇ ಇಂತಹ ಪರಿಸ್ಥಿತಿ ಮಗನಿಗೆ ಬಂದಿತು ಎಂತಲೂ ಬರೆದರು. ಆದರೆ ಗಾಂಧೀಜಿ ಇಲ್ಲಿ ಕೂಡಾ ಅವರ ಆರೋಪಗಳು ಮೈಗೆ ತಾಗದಂತೆ ನಿಲ್ಲುತ್ತಾರೆ. ಮಗ ಸ್ವಾವಲಂಬಿಯಾಗಲಿ ಎಂಬ ತಂದೆಯ ಆಶಯ ಅಪರಾಧ ಎಂದು ಯಾರೂ(ಲೇಖಕನ ಹೊರತಾಗಿ) ಒಪ್ಪಲಿಕ್ಕಿಲ್ಲ.
ಶುದ್ಧ ಶಾಖಾ ಆಹಾರಿ ಗಾಂಧೀಜಿ ಹೊರತುಪಡಿಸಿ ಬೇರೆ ಯಾರದೇ ಕೈಯಲ್ಲಿ ಬಿಯರ್ ಬಾಟಲಿ ಮತ್ತು ಮಾಂಸದ ಬರ್ಗರ್ ಬೇಯಿಸುವ ಚಿತ್ರ ಪ್ರಕಟಿಸಿದ್ದರೆ ಬೀದಿಯಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಆದರೆ ಗಾಂಧಿ ವಿಷಯದಲ್ಲಿ ನಡೆಯಲಿಲ್ಲ. ಇಷ್ಟೇ ಅಲ್ಲ ಭಾರತದಲ್ಲಿ ಗಾಂಧಿ ಪುತ್ಥಳಿಗೆ ಅವಮಾನ ಮಾಡಿದರೆ ಯಾರೂ ಚಕಾರವೆತ್ತುವದಿಲ್ಲ(ನಾನೂ ಸೇರಿದಂತೆ). ಗಾಂಧೀಜಿ ಕನ್ನಡಕ ಕಿತ್ತುಹಾಕಿದ್ದರೆ, ಅವರ ನುಣ್ಣನೇ ತಲೆಗೆ ಬಣ್ಣ, ಸಗಣಿ ಬಳೆದಿದ್ದರೆ ಯಾರೂ ಆ ಕಡೆ ಗಮನ ಕೊಡುವುದಿಲ್ಲ. ಮತ್ತೆ ಮುಂದಿನ ಅಕ್ಟೋಬರ್ ೨ ಅಥವಾ ಗಾಂಧೀಜಿ ಪುಣ್ಯತಿಥಿಯಂದು ಗಾಂಧೀಜಿ ಪುತ್ಥಳಿಯಿಂದ ಕಿತ್ತುಕೊಳ್ಳಲಾಗಿರುವ ಕನ್ನಡಕ ಸ್ಥಳದಲ್ಲಿ ಸರಕಾರಿ ಅಧಿಕಾರಿಗಳು ಮತ್ತೊಂದು ಕನ್ನಡಕ ತಂದು ಹಾಕುತ್ತಾರೆ. ನೀರು ಹಾಕಿ ಶುಚಿಗೊಳಿಸುತ್ತಾರೆ. ಯಥಾ ಸ್ಥಿತಿ ಗಾಂಧಿ ಅಹಿಂಸಾ ಮಾರ್ಗ, ಅವರ ತ್ಯಾಗ, ಹೋರಾಟ ಕುರಿತು ಭಾಷಣ ಮಾಡಲಾಗುತ್ತದೆ. ಕನ್ನಡಕ ತೆಗೆದವರು ಅಥವಾ ತೆಗೆಸಿದವರು ಅಂದು ಗಾಂಧಿ ಕುರಿತು ಭಾಷಣ ಮಾಡಿದರೆ ಅಚ್ಚರಿ ಪಡಬೇಕಾಗಿಲ್ಲ. ಹೌದು ಇಷ್ಟೆಲ್ಲ ಆದರೂ ಪ್ರತಿಭಟನೆ ಮಾಡುವವರೇ ಇಲ್ಲವಲ್ಲ. ಅವರು ಈ ದೇಶದ ರಾಷ್ಟ್ರಪಿತ ಎಂದು ಕರೆಯಲಾಗುತ್ತದೆ. ರಾಷ್ಟ್ರಪಿತನಿಗೆ ಅವಮಾನವಾದರೆ ಪ್ರತಿಭಟಿಸುವವರೇ ಇಲ್ಲವೇ? ಎಂದು ಕೇಳಿದರೆ, ಇಲ್ಲ. ಯಾಕೆ? ಇದು ಕೂಡಾ ಗಾಂಧಿ ಬದುಕಿನ ಒಂದು ವೈಶಿಷ್ಟೆ.
ಏನದು ವೈಶಿಷ್ಟ್ಯ? ಗಾಂಧೀಜಿ ತಮಗಾಗಿ ಹೋರಾಟ ಮಾಡುವವರನ್ನು ಸೃಷ್ಟಿಸಿ ಇಟ್ಟು ಹೋಗಲಿಲ್ಲ. ಅವರು ದೇಶಕ್ಕಾಗಿ ಹೋರಾಟ ಮಾಡಿದರು. ದೇಶದ ಸಲುವಾಗಿ ಹೋರಾಟ ಮಾಡುವವರನ್ನು ಪ್ರೆತ್ಸಾಹಿಸಿ ಬೆಳೆಸಿದರು. ಗಾಂಧೀಜಿ ಅನುಯಾಯಿಗಳು ಇದ್ದರೆ ಅವರು ಗಾಂಧೀಜಿ ವೈಚಾರಿಕತೆಯನ್ನು ಪಾಲಿಸುವವರು ಮಾತ್ರ.
ಉಪಿನ ಮೇಲೆ ಬ್ರಿಟೀಷ್ ಸರಕಾರ ತೆರಿಗೆ ವಿಧಿಸಿದರೆ, ಗಾಂಧೀಜಿ ಸಮಗ್ರ ಭಾರತೀಯರನ್ನು ಸಂಘಟಿಸಿ ಅದರ ವಿರುದ್ಧ ಪ್ರತಿಭಟನೆ ಮಾಡಿದರು. ಅದುವೇ ಉಪ್ಪಿನ ಸತ್ಯಾಗ್ರಹ. ಬ್ರಿಟೀಷ್ ಸರಕಾರ ಅಲ್ಲಾಡಿಹೋಯಿತು. ಆದರೆ ಇವತ್ತು ಜನಸಾಮಾನ್ಯ ತನ್ನ ತುತ್ತಿನ ಚೀಲ ತುಂಬಲು ಉಪಯೋಗಿಸುವ ಅಕ್ಕಿದರ ಗಗನಕ್ಕೇರಿದರೂ ಪ್ರತಿಭಟಿಸುವವರು ದಿಕ್ಕಿಲ್ಲ. ದುಡಿದ ತಂದ ಕಾಳು ಬೀಸಿಕೊಂಡು ಊಟಮಾಡಬೇಕು ಎಂದು ಗಿರಣಿಗೆ ಅಗತ್ಯ ವಿದ್ಯುತ್ ಇಲ್ಲ. ಅದಕ್ಕೂ ಯಾರೂ ಪ್ರತಿಭಟಿಸುತ್ತಿಲ್ಲ. ಯಾಕೆ ಅಂತಾ?
ಹೌದು ಪಾಪ ಅವರು ಯಾರ ವಿರುದ್ಧ ಪ್ರತಿಭಟಿಸಬೇಕು. ಅವರ ಮಾತನ್ನು ಯಾರು ಕೇಳಬೇಕು. ಪ್ರತಿಭಟನೆ ಹೆಚ್ಚಾದರೆ ಪೊಲೀಸ್ ಲಾಟಿ, ಬೂಟುಗಳು ಖುಷಿಯಿಂದ ಕುಣುದಾಡುತ್ತವೆ. ಪ್ರಾಣ ಬೀದಿ ಪಾಲಾಗುತ್ತದೆ. ಅದಕ್ಕಂತಲೇ ಯಾರು ಪ್ರತಿಭಟನೆ ಮಾಡುತ್ತಿಲ್ಲ. ಈಗ ಪ್ರತಿಭಟನೆ ಬರೀ ರಾಜಕೀಯ ಪಕ್ಷಗಳ ಪ್ರಾಯೋಜಿತ ಸಂಘಟನೆಗಳ ಹಕ್ಕಾಗಿದೆ. ತಮಗೆ ಬೇಕಾದ ಪಕ್ಷ ಅಧಿಕಾರದಲ್ಲಿ ಇದ್ದರೆ ಅವರು ಯಾರೂ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡದೆ, ಬಾಯಿಗೆ ಬೀಗ ಹಾಕಿಕೊಂಡಿರುತ್ತಾರೆ. ಸಾಧ್ಯವಾದರ ಸರಕಾರದ ಪರವೇ ಬಹುಪರಾಕ ಹೇಳುತ್ತಾರೆ.
ಗಾಂಧೀಜಿ ಕೈಯಲ್ಲಿ ಬೀರು ಬಾಟಲಿ, ಮೌಂಸ ಬೇಯಿಸುವ ಚಿತ್ರ ನೋಡಿದ ನಂತರ ಇನ್ನೊಬ್ಬ ಜ್ಞಾನ ಪೀಠ ಪ್ರಶಸ್ತಿ ಕನ್ನಡ ಸಾಹಿತಿ ಯು.ಆರ್.ಅನಂತಮೂರ್ತಿ ಅವರು ಬರೆದಿರುವ ‘ಸುಕ್ಕುಗಟ್ಟಿದ ಅಜ್ಜನ ಹೆಗಲು’ ಕವನ ಸಂಕಲನದಲ್ಲಿ ಗಾಂಧೀಜಿ ಸೂಟು, ಬೂಟು ಧರಿಸಿದರೆ ಪೆಕರು ಪೆಕರಾಗಿ ಕಾಣುತ್ತಾರೆ ಎಂದು ಬರೆದಿದ್ದಾರೆ.
ಹೌದ ಗಾಂಧೀಜಿಗೆ ಏನೇ ರೂಪಕೊಡಲು ಯತ್ನಿಸಿದರೂ ಅವರು ಆ ತುಂಡು ಬಟ್ಟೆಯಲ್ಲೇ ನೀಟಾಗಿ ಕಂಡಷ್ಟು ಅವರು ತಮ್ಮ ಕಾಲೇಜ್ ದಿನಗಳಲ್ಲಿ ಧರಸಿದ್ದ ಸೂಟಿನಲ್ಲೂ ಕಾಣಿಸುವುದಿಲ್ಲ.

No comments: